×
Ad

ಸರಕಾರಿ ಗುತ್ತಿಗೆದಾರನ ಗುಂಡಿಕ್ಕಿ ಹತ್ಯೆ: ಬಿಜೆಪಿ ಶಾಸಕನ ವಿರುದ್ಧ ಪ್ರಕರಣ ದಾಖಲು

Update: 2018-12-23 22:22 IST

ಲಕ್ನೊ, ಡಿ.23: ಸರಕಾರಿ ಗುತ್ತಿಗೆದಾರನನ್ನು ಶನಿವಾರ ಅವರ ಮನೆಯಲ್ಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಪ್ರಕರಣದಲ್ಲಿ ಶಾಮೀಲಾಗಿರುವ ಶಂಕೆಯಲ್ಲಿ ಬಿಜೆಪಿ ಶಾಸಕ ಇಂದ್ರ ಪ್ರತಾಪ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಜಯ್ ಪ್ರತಾಪ್ ಸಿಂಗ್(40 ವರ್ಷ) ಎಂಬವರನ್ನು ಕೌಶಲ್‌ಪುರಿಯಲ್ಲಿರುವ ಅವರ ಮನೆಯಲ್ಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಈ ಹತ್ಯೆಯಲ್ಲಿ ಶಾಸಕ ಇಂದ್ರಪ್ರತಾಪ್ ಅವರ ಕೈವಾಡವಿದೆ ಎಂದು ಮೃತನ ತಂದೆ ರಾಜ್‌ಕುಮಾರ್ ಸಿಂಗ್ ದೂರಿದ್ದಾರೆ. ಶಾಸಕ ಇಂದ್ರಪ್ರತಾಪ್ ತನ್ನ ಮಗನಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದು, ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿದ್ದ ಎಂದು ರಾಜ್‌ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.

ಹತ್ಯೆಗೆ ಸಂಬಂಧಿಸಿ ಶಾಸಕ ಪ್ರತಾಪ್ ಹಾಗೂ ಇಬ್ಬರು ಗುರುತು ಪತ್ತೆಯಾಗದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಫೈಝಾಬಾದ್ ಪೊಲೀಸ್ ಅಧೀಕ್ಷಕ ಅನಿಲ್ ಸಿಂಗ್ ತಿಳಿಸಿದ್ದಾರೆ. ಆದರೆ ಆರೋಪವನ್ನು ಶಾಸಕ ಪ್ರತಾಪ್ ನಿರಾಕರಿಸಿದ್ದು, ಇದೊಂದು ಆತ್ಮಹತ್ಯೆ ಪ್ರಕರಣ ಎಂಬುದು ಸ್ಪಷ್ಟವಾಗಿದೆ. ಆದರೆ ಇದಕ್ಕೆ ರಾಜಕೀಯ ಬಣ್ಣ ನೀಡಲಾಗಿದ್ದು ಪ್ರಕರಣದ ಕುರಿತು ಉನ್ನತ ಮಟ್ಟದ, ನಿಷ್ಪಕ್ಷಪಾತದ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News