×
Ad

ಮಂಗಳೂರು ಕೇಂದ್ರ ರೈಲು ನಿಲ್ದಾಣದಲ್ಲಿ ಉಚಿತ ತುರ್ತು ಸೇವಾ ಕೇಂದ್ರ ಆರಂಭ

Update: 2018-12-23 23:13 IST

ಮಂಗಳೂರು, ಡಿ.23: ಕೇಂದ್ರ ರೈಲ್ವೆ ಇಲಾಖೆ ಹಾಗೂ ಯುನಿಟಿ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ತುರ್ತು ಸೇವಾ ಕೇಂದ್ರವನ್ನು ನಗರದ ಕೇಂದ್ರ ರೈಲು ನಿಲ್ದಾಣದ ಆವರಣದಲ್ಲಿ ರವಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಸಂಸದ ನಳಿನ್‌ಕುಮಾರ್ ಕಟೀಲ್ ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು.

ಉಚಿತ ತುರ್ತು ಸೇವಾ ಕೇಂದ್ರವನ್ನು ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿದ ಬಳಿಕ ಮಾತನಾಡಿದ ಸಂಸದರು, ಕೇಂದ್ರ ಸರಕಾರದ ರೈಲ್ವೆ ಇಲಾಖೆ ಹಾಗೂ ಯುನಿಟಿ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಉಚಿತ ತುರ್ತು ಸೇವಾ ಕೇಂದ್ರವನ್ನು ತೆರೆಯಲಾಗಿದೆ. ರೈಲಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನಸಾಮಾನ್ಯರೇ ಪ್ರಯಾಣಿಸುತ್ತಾರೆ. ಅವಘಡ ಮತ್ತಿತರ ಸಂದರ್ಭ ರೈಲು ಪ್ರಯಾಣಿಕರಿಗೆ ಈ ಸೇವಾ ಕೇಂದ್ರ ಸಹಕಾರಿಯಾಗಲಿದೆ ಎಂದು ಹೇಳಿದರು.

ಮಾದರಿಯಾದ ಯುನಿಟಿ ಆಸ್ಪತ್ರೆ:  ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಹಲವಾರು ಬೇಡಿಕೆಗಳು ಕೇಳಿ ಬಂದಿವೆ. ಅವುಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಬೇಡಿಕೆಗಳೇ ಹೆಚ್ಚು. ಮಂಗಳೂರು ಮೆಡಿಕಲ್ ಟೂರಿಸಂಗೆ ಹೆಸರುವಾಸಿಯಾಗಿದೆ. ರೈಲು ಪ್ರಯಾಣಿಕರ ಬೇಡಿಕೆಗಳನ್ನು ಈಡೇರಿಸುವಲ್ಲಿ ಯುನಿಟಿ ಆಸ್ಪತ್ರೆಯು ಮುಂದಾಗಿರುವುದು ಮಾದರಿಯಾಗಿದೆ ಎಂದು ಸಂಸದರು ಶ್ಲಾಘನೆ ವ್ಯಕ್ತಪಡಿಸಿದರು.

ಮಂಗಳೂರು ರೈಲು ನಿಲ್ದಾಣವು ಮಮತಾ ಬ್ಯಾನರ್ಜಿ ಹಾಗೂ ಸದಾನಂದ ಗೌಡರು ರೈಲ್ವೆ ಇಲಾಖೆ ಸಚಿವರಾಗಿದ್ದಾಗ ದೇಶದ ನಂಬರ್ ವನ್ ರೈಲು ನಿಲ್ದಾಣವಾಗಿತ್ತು. ಸದ್ಯ ಸುಮಾರು 75 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳು ಆರಂಭವಾಗಿವೆ. ದಿನದಿಂದ ದಿನಕ್ಕೆ ರೈಲು ನಿಲ್ದಾಣದಲ್ಲಿ ಪರಿವರ್ತನೆಗಳಾಗುತ್ತಿವೆ. ಲಿಫ್ಟ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಯುನಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಅಜ್ಮಲ್ ಹಬೀಬ್, ಕಾರ್ಯ ನಿರ್ವಾಹಕ ನಿರ್ದೇಶಕ ಅಶ್ಫಕ್ ಹಬೀಬ್, ಜನರಲ್ ಮ್ಯಾನೇಜರ್ ದೇವರಾಜ್, ಜೆ.ಪಿ.ಶೆಟ್ಟಿ, ಸಚ್ಚಿದಾನಂದ ಶೆಟ್ಟಿ, ರೈಲು ಇಲಾಖೆಯ ಡಿವಿಜನಲ್ ಅಧಿಕಾರಿಗಳಾದ ಶಿವಶಂಕರ್ ಮೂರ್ತಿ, ರಾಕೇಶ್ ಮೀನಾ, ಗೋಪಿಚಂದನ್, ಶ್ರೀಧರ್, ಸುರೇಶ್ ಎನ್., ಸುಹೈಲ್, ರೈಲು ನಿಲ್ದಾಣದ ಮ್ಯಾನೇಜರ್ ರಾಮ್‌ಕುಮಾರ್, ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ತಾರಾನಾಥ ಮತ್ತಿತರರು ಉಪಸ್ಥಿತರಿದ್ದರು.

ಖಾಸಗಿ ಸಹಭಾಗಿತ್ವ ಲಾಭದಾಯಕ: ಸಂಸದ ನಳಿನ್‌ಕುಮಾರ್ 

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಖಾಸಗೀಕರಣ ಮಾಡಬೇಕು ಎನ್ನುವ ಕೂಗು ಒಂದೆಡೆ ಇದ್ದರೆ, ಖಾಸಗೀಕರಣಕ್ಕೆ ವಿರೋಧಿಸುತ್ತಿ ರುವವರ ಗುಂಪು ಮತ್ತೊಂದೆಡೆ ಇದೆ. ಹಾಗೆಯೆ ಕೇಂದ್ರ ರೈಲ್ವೆ ಇಲಾಖೆ ಮತ್ತು ನಗರದ ಯುನಿಟಿ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಉಚಿತ ತುರ್ತು ಸೇವಾ ಕೇಂದ್ರ ತೆರೆಯುತ್ತಿರುವುದು ಖಾಸಗೀಕರಣದ ಭಾಗವೇ ಆಗಿದೆ. ಖಾಸಗಿ ಸಹಭಾಗಿತ್ವದಿಂದ ಪ್ರಯಾಣಿಕರು, ಸರಕಾರ ಸೇರಿದಂತೆ ಎಲ್ಲರಿಗೂ ಲಾಭ ದಾಯಕವಾಗಿದೆ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ತಿಳಿಸಿದರು.

ಯುನಿಟಿ ಆಸ್ಪತ್ರೆ ಸೇವೆಗೆ ಸದಾ ಸಿದ್ಧ: ಹಬೀಬ್ ರೆಹಮಾನ್

ಯುನಿಟಿ ಆಸ್ಪತ್ರೆಯು ಹಲವಾರು ವರ್ಷಗಳಿಂದ ರೋಗಿಗಳಿಗೆ ಸೇವೆ ನೀಡುತ್ತಾ ಬಂದಿದೆ. ಅದರಲ್ಲೂ ತುರ್ತು ಸೇವೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ. ಸದ್ಯ ಮಂಗಳೂರು ಕೇಂದ್ರ ರೈಲು ನಿಲ್ದಾಣದ ಆವರಣದಲ್ಲಿ ಉಚಿತ ತುರ್ತು ಸೇವಾ ಕೇಂದ್ರವನ್ನು ಆರಂಭಿಸಲಾಗಿದೆ. ತುರ್ತು ಸಂದರ್ಭದಲ್ಲಿ ಜನತೆಗೆ ಸಹಕಾರಿಯಾಗಲಿ ಎನ್ನುವ ಉದ್ದೇಶದಿಂದ ಪ್ರಾರಂಭಿಸಲಾಗಿದೆ. ಯುನಿಟಿ ಆಸ್ಪತ್ರೆ ಸೇವೆಗೆ ಸದಾ ಸಿದ್ಧವಾಗಿರುತ್ತದೆ ಎಂದು ಯುನಿಟಿ ಆಸ್ಪತ್ರೆಯ ಸಂಸ್ಥಾಪಕ ಹಾಗೂ ಚೇರ್‌ಮನ್ ಸಿ.ಪಿ.ಹಬೀಬ್ ರೆಹಮಾನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News