ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುವುದು ಹೇಗೆಂದು ಮೋದಿ ಸರಕಾರಕ್ಕೆ ತೋರಿಸುವೆ: ಇಮ್ರಾನ್ ಖಾನ್

Update: 2018-12-23 18:24 GMT

ಲಾಹೋರ್, ಡಿ. 23: ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳಬೇಕು ಎನ್ನುವುದನ್ನು ನರೇಂದ್ರ ಮೋದಿ ಸರಕಾರಕ್ಕೆ ನಾನು ತೋರಿಸಿಕೊಡುವೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಭಾರತದಲ್ಲಿ ನಡೆದಿರುವ ಗುಂಪು ಹಿಂಸಾಚಾರದ ಬಗ್ಗೆ ಬಾಲಿವುಡ್ ನಟ ನಾಸಿರುದ್ದೀನ್ ಶಾ ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ ಎದ್ದಿರುವ ವಿವಾದಕ್ಕೆ ಪ್ರತಿಕ್ರಿಯಿಸಿ ಅವರು ಈ ಹೇಳಿಕೆ ನೀಡಿದ್ದಾರೆ.

ಉತ್ತರ ಪ್ರದೇಶದ ಬುಲಾಂದ್‌ಶಹರ್ ಜಿಲ್ಲೆಯಲ್ಲಿ ಇತ್ತೀಚೆಗೆ ಗುಂಪಿನಿಂದ ಥಳಿತಕ್ಕೊಳಗಾಗಿ ಪೊಲೀಸ್ ಅಧಿಕಾರಿಯೊಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿ ನಾಸಿರುದ್ದೀನ್ ಶಾ ನೀಡಿರುವ ಹೇಳಿಕೆಯು ಈಗ ವಿವಾದವಾಗಿ ಪರಿಣಮಿಸಿದೆ.

ಪಾಕಿಸ್ತಾನದ ಪಂಜಾಬ್ ರಾಜ್ಯ ಸರಕಾರದ 100 ದಿನಗಳ ಸಾಧನೆಯನ್ನು ಬಿಂಬಿಸಲು ಏರ್ಪಡಿಸಲಾದ ಸಮಾರಂಭದಲ್ಲಿ ಮಾತನಾಡಿದ ಇಮ್ರಾನ್, ಪಾಕಿಸ್ತಾನದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಿಗಬೇಕಾದ ಹಕ್ಕುಗಳು ಸಿಗುವಂತೆ ಮಾಡುತ್ತೇನೆ ಎಂದು ಹೇಳಿದರು.

ಇದು ಪಾಕಿಸ್ತಾನದ ಸ್ಥಾಪಕ ಮುಹಮ್ಮದ್ ಅಲಿ ಜಿನ್ನಾರ ಕನಸೂ ಆಗಿತ್ತು ಎಂದು ಅವರು ಅಭಿಪ್ರಾಯಪಟ್ಟರು.

‘ಹೊಸ ಪಾಕಿಸ್ತಾನ’ದಲ್ಲಿ ಅಲ್ಪಸಂಖ್ಯಾತರಲ್ಲಿ ಭದ್ರತೆಯ ಮನೋಭಾವ ತುಂಬಿಸಲು ಹಾಗೂ ಅವರು ಸಮಾನ ಹಕ್ಕುಗಳನ್ನು ಪಡೆಯುವಂತಾಗಲು ನಾನು ಶ್ರಮಿಸುತ್ತೇನೆ ಎಂದರು.

 ‘‘ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳಬೇಕೆಂದು ನಾವು ಮೋದಿ ಸರಕಾರಕ್ಕೆ ತೋರಿಸಿಕೊಡುತ್ತೇವೆ... ಭಾರತದಲ್ಲಿಯೂ, ಅಲ್ಪಸಂಖ್ಯಾತರನ್ನು ಸಮಾನ ನಾಗರಿಕರನ್ನಾಗಿ ನೋಡಿಕೊಳ್ಳಲಾಗುತ್ತಿಲ್ಲ ಎಂದು ಜನರು ಹೇಳುತ್ತಿದ್ದಾರೆ’’ ಎಂದು ಇಮ್ರಾನ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News