ಉತ್ತರ ಪ್ರದೇಶದಲ್ಲಿ ದೇಶದಲ್ಲೇ ಗರಿಷ್ಠ ಪೊಲೀಸ್ ದೌರ್ಜನ್ಯ ಪ್ರಕರಣಗಳು

Update: 2018-12-24 08:21 GMT

ಹೊಸದಿಲ್ಲಿ, ಡಿ.24: ಉತ್ತರ ಪ್ರದೇಶದಲ್ಲಿ 2014-2016ರ ನಡುವೆ 236 ಪೊಲೀಸ್ ದೌರ್ಜನ್ಯ ಪ್ರಕರಣಗಳು ವರದಿಯಾಗಿದ್ದು, ಇದು ದೇಶದ ಇತರ ರಾಜ್ಯಗಳಿಗೆ ಹೋಲಿಸಿದಾಗ ಗರಿಷ್ಠ ಪ್ರಮಾಣದ್ದಾಗಿದೆ. ಈ ಅವಧಿಯಲ್ಲಿ 2014-16ರ ಅವಧಿಯಲ್ಲಿ ದೇಶದಲ್ಲಿ ವರದಿಯಾದ ಒಟ್ಟು 411 ಪ್ರಕರಣಗಳು ಪೈಕಿ ಶೇ.57.4 ಪ್ರಕರಣಗಳು ಉತ್ತರ ಪ್ರದೇಶವೊಂದರಲ್ಲೇ ನಡೆದಿದೆ ಎಂದು ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ವರದಿ ತಿಳಿಸಿದೆ.

ಉತ್ತರ ಪ್ರದೇಶದ ನಂತರದ ಸ್ಥಾನ ದಿಲ್ಲಿಯದ್ದು. ಇಲ್ಲಿ ಇದೇ ಅವಧಿಯಲ್ಲಿ 63 ಪ್ರಕರಣಗಳು ದಾಖಲಿಸಲ್ಪಟ್ಟಿವೆ. ಆದರೆ ಈ 63 ಪ್ರಕರಣಗಳ ಪೈಕಿ ಒಂದೇ ಒಂದು ಪ್ರಕರಣದಲ್ಲೂ ಪೊಲೀಸ್ ಸಿಬ್ಬಂದಿ ಅಪರಾಧಿಗಳೆಂದು ಘೋಷಿತರಾಗಿಲ್ಲ.

ಉತ್ತರ ಪ್ರದೇಶದಲ್ಲಿ 2014ರಲ್ಲಿ ಪೊಲೀಸ್ ಸಿಬ್ಬಂದಿ ಆರೋಪಿಗಳಾಗಿರುವ 46 ಮಾನವ ಹಕ್ಕು ಉಲಲಂಘನೆ ಪ್ರಕರಣಗಳು ಬೆಳಕಿಗೆ ಬಂದಿದ್ದರೆ ಅವುಗಳಲ್ಲಿ 39 ಪ್ರಕರಣಗಳು ತನಿಖೆ ವೇಳೆ ಸುಳ್ಳೆಂದು ಸಾಬೀತಾಗಿದ್ದವು. ಏಳು ಪೊಲೀಸ್ ಸಿಬ್ಬಂದಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದ್ದರೆ ಮೂವರನ್ನು ನ್ಯಾಯಾಲಯ ಅಪರಾಧಿಗಳೆಂದು ಘೋಷಿಸಿತ್ತು. ಈ ವರ್ಷ ಕೂಡ ದೇಶದಲ್ಲಿ ದಾಖಲಾದ 108 ಪೊಲೀಸ್ ದೌರ್ಜನ್ಯ ಪ್ರಕರಣಗಳ ಪೈಕಿ ಶೇ. 42.5ರಷ್ಟು ಪ್ರಕರಣಗಳು ಉತ್ತರ ಪ್ರದೇಶದಿಂದ ವರದಿಯಾಗಿದ್ದವು.

2015ರಲ್ಲಿ ಉತ್ತರ ಪ್ರದೇಶ ಪೊಲೀಸರ ವಿರುದ್ಧ 34 ಪ್ರಕರಣಗಳು ದಾಖಲಾಗಿದ್ದು, ಅವುಗಳ ಪೈಕಿ ಒಂದು ಸುಳ್ಳು ಪ್ರಕರಣವೆಂದು ತಿಳಿದು ಬಂದಿತ್ತು. ಉಳಿದ ಪ್ರಕರಣಗಳಲ್ಲಿ 19 ಪೊಲೀಸ್ ಸಿಬ್ಬಂದಿಯ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದ್ದರೂ ಯಾರನ್ನೂ ಅಪರಾಧಿಗಳೆಂದು ನ್ಯಾಯಾಲಯ ಘೋಷಿಸಿಲ್ಲ. ಇದೇ ವರ್ಷದಲ್ಲಿ ದೇಶದಲ್ಲಿ 94 ಪೊಲೀಸ್ ದೌರ್ಜನ್ಯ ಪ್ರಕರಣಗಳು ವರದಿಯಾಗಿದ್ದವು.

2016ರಲ್ಲಿ ಒಟ್ಟು 156 ಪೊಲೀಸ್ ದೌರ್ಜನ್ಯ ಪ್ರಕರಣಗಳು ಉತ್ತರ ಪ್ರದೇಶದಿಂದ ವರದಿಯಾಗಿದ್ದವು. ಇವುಗಳ ಪೈಕಿ 69 ಸುಳ್ಳೆಂದು ತಿಳಿದು ಬಂದಿದ್ದರೆ, ಉಳಿದ ಪ್ರಕರಣಗಳಲ್ಲಿ 39 ಮಂದಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿತ್ತು. ಈ ವರ್ಷ ದೇಶದಲ್ಲಿ 209 ಪ್ರಕರಣಗಳು ದಾಖಲಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News