2019ರಲ್ಲಿ ಮಹಾಮೈತ್ರಿಕೂಟ ಅಧಿಕಾರಕ್ಕೆ, ರಾಹುಲ್ ಗಾಂಧಿ ಪ್ರಧಾನಿ: ಮೊಯ್ಲಿ

Update: 2018-12-24 09:13 GMT

ಮಂಗಳೂರು, ಡಿ.24: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಹಾಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. 200 ಸ್ಥಾನಗಳನ್ನು ಕಾಂಗ್ರೆಸ್ ಜಯಿಸಲಿದ್ದು, ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ ಆಯ್ಕೆಯಾಗಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಎಂ.ವೀರಪ್ಪ ಮೊಯ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಕ್ಷೀಣಿಸಿದೆ. ಅದೇರೀತಿ ಶಿವಸೇನೆ ಮತ್ತು ಕುಶ್ವಾಹ ಅವರ ಪಕ್ಷ ಎನ್‌ಡಿಎ ತೊರೆದಿವೆ. ಇದೇವೇಳೆ ವಿಪಕ್ಷಗಳು ಧ್ರುವಿಕರಣಗೊಂಡು ಬಲಯುತವಾಗುತ್ತಿವೆ ಎಂದರು.

ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಬಿಜೆಪಿಗೆ 3 ಅಥವಾ 4 ಸ್ಥಾನ ಸಿಕ್ಕಿದರೂ ಆಶ್ಚರ್ಯವಿಲ್ಲ. ಒಟ್ಟಾರೆಯಾಗಿ ಮೋದಿ ಅಧಿಕಾರದಿಂದ ಕೆಳಗಿಳಿಯುವುದು ನಿಶ್ಚಿತ ಎಂದು ಅವರು ಹೇಳಿದರು.

ರಾಹುಲ್ ಗಾಂಧಿ ಪ್ರಧಾನಿ ಹುದ್ದೆಗೇರುವುದನ್ನು ಮೈತ್ರಿಕೂಟ ಒಪ್ಪುತ್ತದೆ. ಆದರೆ ಈಗಲೇ ಪ್ರಧಾನಿ ಅಭ್ಯರ್ಥಿಯನ್ನು ಘೋಷಣೆ ಮಾಡುವುದಿಲ್ಲ. ಚುನಾವಣೆ ಆಗಲಿ. ಮೈತ್ರಿಕೂಟದಲ್ಲಿ ಕಾಂಗ್ರೆಸ್ 200 ಸ್ಥಾನ ಜಯಿಸಿದರೆ ರಾಹುಲ್ ಗಾಂಧಿ ಮೈತ್ರಿಕೂಟದ ಮುಖಂಡರಾಗುತ್ತಾರೆ. ಅತ್ಯಧಿಕ ಸ್ಥಾನ ಗಳಿಸಿದರು ಪ್ರಧಾನಿ ಆಗುತ್ತಾರೆ ಎಂದು ಮೊಯ್ಲಿ ವಿವರಿಸಿದರು.

ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಳಿಕ ಗೊಂದಲ ಕಡಿಮೆ ಆಗಿದೆ. ಬಿಜೆಪಿ ಗಾಳ ಹಾಕುತ್ತಾ ಕಾಯುತ್ತಾ ಇತ್ತು. ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ಇಲ್ಲ ಎಂಬ ದೂರಿತ್ತು. ಈಗ ಅದೆಲ್ಲವನ್ನು ಈಗ ಸರಿಪಡಿಸಲಾಗಿದೆ ಎಂದ ಮೊಯ್ಲಿ, 60 ಮಂದಿಯನ್ನೂ ಸಚಿವರನ್ನಾಗಿಸಲು ಸಾಧ್ಯವಿಲ್ಲ. ಮಂತ್ರಿ ಆಗದವರು ಸಹನೆ ಕಳೆದುಕೊಳ್ಳಬಾರದು ಎಂದು ಅತೃಪ್ತ ಕಾಂಗ್ರೆಸ್ ಶಾಸಕರಿಗೆ ಕಿವಿಮಾತು ಹೇಳಿದರು.

ಮುಂಬರು ಲೋಕಸಭಾ ಚುನಾವಣೆಯಲ್ಲಿ ತಾನು ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧಿಸುತ್ತೇನೆ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಮೊಯ್ಲಿ ಉತ್ತರಿಸಿದರು. ಮೂರನೇ ಬಾರಿಯೂ ಚಿಕ್ಕಬಳ್ಳಾಪುರದಿಂದಲೇ ಸ್ಪರ್ಧಿಸುವೆ. ಮಂಗಳೂರಿನಿಂದ ಸ್ಪರ್ಧಿಸಲು ನಾನು ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News