ಲಂಚ ಪ್ರಕರಣ: ಪಾಕ್ ಮಾಜಿ ಪ್ರಧಾನಿ ನವಾಝ್ ಶರೀಫ್ ಗೆ 7 ವರ್ಷ ಜೈಲು

Update: 2018-12-24 16:58 GMT

ಇಸ್ಲಾಮಾಬಾದ್, ಡಿ. 24: ಪಾಕಿಸ್ತಾನದ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯವೊಂದು ಸೋಮವಾರ, ‘ಅಲ್-ಅಝೀಝಿಯ ಸ್ಟೀಲ್ ಮಿಲ್ಸ್’ ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ಪ್ರಧಾನಿ ನವಾಝ್ ಶರೀಫ್‌ಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಅದೇ ವೇಳೆ, ಮಹತ್ವದ ಪನಾಮ ದಾಖಲೆಗಳ ಹಗರಣಕ್ಕೆ ಸಂಬಂಧಿಸಿದ ‘ಫ್ಲಾಗ್‌ಶಿಪ್ ಇನ್ವೆಸ್ಟ್‌ಮೆಂಟ್ಸ್’ ಭ್ರಷ್ಟಾಚಾರ ಪ್ರಕರಣದಲ್ಲಿ ನ್ಯಾಯಾಲಯವು ಶರೀಫ್‌ರನ್ನು ದೋಷಮುಕ್ತಗೊಳಿಸಿದೆ.

ಎರಡನೇ ಅಕೌಂಟಬಿಲಿಟಿ ನ್ಯಾಯಾಲಯದ ನ್ಯಾಯಾಧೀಶ ಮುಹಮ್ಮದ್ ಅರ್ಶದ್ ಮಲಿಕ್, ಶರೀಫ್ ಕುಟುಂಬದ ವಿರುದ್ಧದ ಎರಡು ಬಾಕಿಯಿದ್ದ ಪ್ರಕರಣಗಳ ತೀರ್ಪುಗಳನ್ನು ನೀಡಿದರು. ಈ ಪ್ರಕರಣಗಳ ತೀರ್ಪನ್ನು ಕಳೆದ ವಾರ ಕಾದಿರಿಸಲಾಗಿತ್ತು.

ಅಲ್-ಅಝೀಝಿಯ ಪ್ರಕರಣದಲ್ಲಿ 68 ವರ್ಷದ ಮಾಜಿ ಪ್ರಧಾನಿ ವಿರುದ್ಧ ಬಲವಾದ ಪುರಾವೆಯಿದೆ ಎಂದು ತನ್ನ ತೀರ್ಪಿನಲ್ಲಿ ನ್ಯಾಯಾಧೀಶ ಮಲಿಕ್ ಹೇಳಿದರು ಎಂದು ‘ಜಿಯೋ ಟಿವಿ’ ವರದಿ ಮಾಡಿದೆ.

ತೀರ್ಪು ಪ್ರಕಟವಾಗುವಾಗ ಶರೀಫ್ ನ್ಯಾಯಾಲಯದಲ್ಲಿದ್ದರು.

ಮೂರು ಬಾರಿಯ ಪ್ರಧಾನಿ ವಿರುದ್ಧದ ಉಳಿದಿರುವ ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆಯನ್ನು ಮುಕ್ತಾಯಗೊಳಿಸಲು ಸುಪ್ರೀಂ ಕೋರ್ಟ್ ವಿಚಾರಣಾ ನ್ಯಾಯಾಲಯಕ್ಕೆ ಸೋಮವಾರದವರೆಗಿನ ಗಡುವು ನೀಡಿತ್ತು.

ಪನಾಮ ದಾಖಲೆಗಳ ಹಗರಣ ಪ್ರಕರಣದಲ್ಲಿ, 2017 ಜುಲೈಯಲ್ಲಿ ಶರೀಫ್‌ರನ್ನು ಪ್ರಧಾನಿ ಹುದ್ದೆಯಿಂದ ಅನರ್ಹಗೊಳಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. 2017 ಸೆಪ್ಟಂಬರ್ 8ರಂದು ನ್ಯಾಶನಲ್ ಅಕೌಂಟಬಿಲಿಟಿ ಬ್ಯೂರೋ ಶರೀಫ್ ವಿರುದ್ಧ ಆ್ಯವನ್‌ಫೀಲ್ಡ್ ಪ್ರಾರ್ಟೀಸ್ ಪ್ರಕರಣ, ಫ್ಲಾಗ್‌ಶಿಪ್ ಇನ್ವೆಸ್ಟ್‌ಮೆಂಟ್ ಪ್ರಕರಣ ಮತ್ತು ಅಲ್-ಅಝೀಝಿಯ ಸ್ಟೀಲ್ ಮಿಲ್ಸ್- ಈ ಮೂರು ಪ್ರಕರಣಗಳನ್ನು ದಾಖಲಿಸಿತು.

ಈ ವರ್ಷದ ಜುಲೈಯಲ್ಲಿ ಶರೀಫ್, ಅವರ ಪುತ್ರಿ ಮರ್ಯಮ್ ಮತ್ತು ಅಳಿಯ ಹಾಗೂ ನಿವೃತ್ತ ಕ್ಯಾಪ್ಟನ್ ಮುಹಮ್ಮದ್ ಸಫ್ದರ್‌ಗೆ ಇನ್ನೊಂದು ಭ್ರಷ್ಟಾಚಾರ ಪ್ರಕರಣದಲ್ಲಿ 11 ವರ್ಷಗಳ ಜೈಲು ಶಿಕ್ಷೆ ವಿಧಿಸಿರುವುದನ್ನು ಸ್ಮರಿಸಬಹುದಾಗಿದೆ. ಆದಾಗ್ಯೂ, ಇಸ್ಲಾಮಾಬಾದ್ ಹೈಕೋರ್ಟ್ ಅವರು ಮೂವರಿಗೂ ಸೆಪ್ಟಂಬರ್‌ನಲ್ಲಿ ಜಾಮೀನು ಮಂಜೂರು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News