ಸುಧಾಕರ ದೇವಾಡಿಗರಿಗೆ ಅಂಚೆ ಇಲಾಖೆಯ ಮೇಘದೂತ ಪ್ರಶಸ್ತಿ ಪ್ರದಾನ
ಉಡುಪಿ, ಡಿ.24: ದೆಹಲಿಯ ನಾಶನಲ್ ಮೀಡಿಯ ಸೆಂಟರ್‌ನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಸಂಪರ್ಕ ಇಲಾಖೆಯ ಸಚಿವ ಮನೋಜ್ ಸಿಹ್ನಾ ಮಣಿಪಾಲ ಅಂಚೆ ವ್ಯವಹಾರ ಕೇಂದ್ರದ ಅಧೀಕ್ಷಕ ಸುಧಾಕರ ಜಿ. ದೇವಾಡಿಗ ಅವರಿಗೆ ಮೇಘದೂತ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಈ ಪ್ರಶಸ್ತಿಯು 21000ರೂ. ನಗದು ಪುರಸ್ಕಾರ, ಚಿನ್ನದ ಪದಕ ಹಾಗೂ ಸಮ್ಮಾನ ಪತ್ರವನ್ನು ಒಳಗೊಂಡಿದೆ. ದೇವಾಡಿಗ ಗ್ರೂಪ್ ಬಿ, ಗ್ರೂಪ್ ಎ ಅಧಿಕಾರಿ ವರ್ಗ ಕೆಟಗರಿಯಲ್ಲಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಸಂದರ್ಭದಲ್ಲಿ ಇಲಾಖೆ ಅಂಚೆ ಕಾರ್ಯದರ್ಶಿ ಅನಂತನಾರಾಯಣ ಹಾಗೂ ಮಹಾ ನಿರ್ದೇಶಕ ಮೀರಾ ಹಾಂಡ ಉಪಸ್ಥಿತರಿದ್ದರು.
ಅಂಚೆ ಸಹಾಯಕರಾಗಿ 1983ರಲ್ಲಿ ಅಂಚೆ ಸೇವೆಗೆ ಸೇರಿದ ಸುಧಾಕರ ಜಿ. ದೇವಾಡಿಗ ಪದೋನ್ನತಿ ಹೊಂದಿ ಅಂಚೆ ನಿರೀಕ್ಷಕ, ಸಹಾಯಕ ಅಂಚೆ ಅಧೀಕ್ಷಕರಾಗಿಯೂ ಕಾರ್ಯನಿರ್ವಹಿಸಿದ್ದು, ಈಗ ಅಂಚೆ ವ್ಯವಹಾರ ಕೇಂದ್ರ ಮಣಿಪಾಲದ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿವಿಧ ವ್ಯವಸ್ಥೆಯ ಮೂಲಕ ಇಲಾಖೆಗೆ ಗಣನೀಯ ಆದಾಯ ತಂದಿರುವ ಹಾಗೂ ಅಂಚೆ ಇಲಾಖೆಯ ಗ್ರಾಹಕರಿಗೆ ಮೌಲ್ಯಯುತವಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.