ಉಚಿತ ಸೇವೆಗಾಗಿ ಶೀತಲಿಕೃತ ಶವ ರಕ್ಷಣಾಯಂತ್ರ ಕೊಡುಗೆ
ಉಡುಪಿ,ಡಿ.24: ಉಚಿತ ಸೇವೆ ನೀಡುವ ನಿಟ್ಟಿನಲ್ಲಿ ವಿದ್ಯುತ್ ಚಾಲಿತ ಶೀತಲಿಕೃತ ಶವ ರಕ್ಷಣಾ ಯಂತ್ರ ಹಾಗೂ ಶವ ಸ್ನಾನ ಮಾಡಿಸಲು ಅನೂಕಲಕರ ವಾದ ಸಾಧನವನ್ನು ಭಾರತ್ ಡೆವಲಪರ್ಸ್‌ನ ಮಾಲಕ ಪ್ರಪುಲ್ಲಚಂದ್ರ ರಾವ್ ಇಂದು ಉಡುಪಿ ಜಿಲ್ಲಾ ನಾಗರೀಕ ಸಮಿತಿಗೆ ಕೊಡುಗೆಯಾಗಿ ನೀಡಿದರು.
ಸಮಿತಿ ಕಚೇರಿಯ ವಠಾರದಲ್ಲಿ ಜರುಗಿದ ಯಂತ್ರ ಹಸ್ತಾಂತರ ಕಾರ್ಯ ಕ್ರಮದಲ್ಲಿ ಉದ್ಯಮಿ ಮುರಳಿಧರ ಬಲ್ಲಾಳ್, ಸಮಿತಿಯ ಪ್ರಧಾನ ಕಾರ್ಯ ದರ್ಶಿ ನಿತ್ಯಾನಂದ ಒಳಕಾಡು, ಸದಸ್ಯರಾದ ತಾರಾನಾಥ್ ಮೇಸ್ತ ಶಿರೂರು, ಡೇವಿಡ್ ಉಪಸ್ಥಿತರಿದ್ದರು.
ಕಳೆದ ವರ್ಷ ಉದ್ಯಮಿ ಮುರಳಿಧರ್ ಬಲ್ಲಾಳ್ ಉಚಿತ ಶವ ಸಂರಕ್ಷಣಾ ಯಂತ್ರವನ್ನು ಸಮಿತಿಗೆ ನೀಡಿದ್ದರು. ಉಚಿತ ಶವ ಯಂತ್ರದ ಸೇವಾ ವಿಸ್ತಾರ ವನ್ನು ಉಡುಪಿ ತಾಲೂಕಿನ ವ್ಯಾಪ್ತಿಯಿಂದ ಕಾಪು, ಹೆಬ್ರಿ, ಬ್ರಹ್ಮಾವರ ತಾಲೂಕಿಗಳಿಗೆ ವಿಸ್ತರಿಸಿದಾಗ, ಯಂತ್ರದ ಬೇಡಿಕೆ ಹೆಚ್ಚಾಯಿತು. ಸಮಿತಿಯ ಮೌಖಿಕ ಮನವಿಗೆ ಸ್ಪಂದಿಸಿದ ಪ್ರಪುಲ್ಲಚಂದ್ರ ರಾವ್ 90 ಸಾವಿರ ರೂ. ಮೊತ್ತದ ಶವ ರಕ್ಷಣಾ ಯಂತ್ರವನ್ನು ಕೊಡುಗೆಯಾಗಿ ನೀಡಿದರು. ಅದರ ಜೊತೆ 16ಸಾವಿರ ರೂ. ಮೌಲ್ಯದ ಶವ ಸ್ನಾನ ಮಾಡಿಸುವ ಟೇಬಲನ್ನು ನೀಡಿದರು. ಪ್ರಸ್ತುತ ಸಮಿತಿಯಿಂದ ಎರಡು ಶವ ಯಂತ್ರಗಳು ಸಾರ್ವಜನಿಕ ಉಚಿತ ಸೇವೆಗೆ ಲಭ್ಯ ಇದೆ. ಸಾಗಾಟದ ವೆಚ್ಟವನ್ನು ಬಳಕೆದಾರರು ಭರಿಸಬೇಕಾಗುತ್ತದೆ. ಅಗತ್ಯ ಇದ್ದವರು ಮೊಬೈಲ್ -9164901111ನ್ನು ಸಂಪರ್ಕಿಸಬಹುದೆಂದು ನಿತ್ಯಾನಂದ ಒಳಕಾಡು ತಿಳಿಸಿದ್ದಾರೆ.