×
Ad

ಶಾಂತಿಯುತ ಸಮಾಜದ ನಿರ್ಮಾಣ 'ಕ್ರಿಸ್ಮಸ್' ಉಡುಗೊರೆ: ಉಡುಪಿ ಧರ್ಮಾಧ್ಯಕ್ಷ ಜೆರಾಲ್ಡ್ ಲೋಬೊ ಕ್ರಿಸ್ಮಸ್ ಸಂದೇಶ

Update: 2018-12-24 21:59 IST

ಉಡುಪಿ, ಡಿ.24: ವಿಶ್ವದಾದ್ಯಂತ ಶಾಂತಿ ಕದಡಿರುವಾಗ ಪ್ರೀತಿ, ಸಹಬಾಳ್ವೆ, ಐಕ್ಯತೆ ಎಂಬ ಬೀಜ ವನ್ನು ಬಿತ್ತಿ ಎಲ್ಲೆಡೆ ಶಾಂತಿ ಮತ್ತು ಸೌಹಾರ್ದತೆಯನ್ನು ಸ್ಥಾಪಿಸುವ ಕಾರ್ಯ ನಮ್ಮದಾಗಬೇಕಿದೆ. ಯಾರನ್ನೂ ಪ್ರತ್ಯೇಕಿಸದೆ ಎಲ್ಲರನ್ನೂ ನಮ್ಮವರೆಂದು ಸ್ವೀಕರಿಸುವ ಉದಾರತೆ ನಮ್ಮಲ್ಲಿ ಬೆಳೆಯಬೇಕು. ಶಾಂತಿಯು ನಮ್ಮ ಮನೆ, ಮನಗಳಲ್ಲಿ ಮತ್ತು ಸಮಾಜದಲ್ಲಿ ಮನೆ ಮಾಡಬೇಕು. ಇದೇ ನಾವು ಪರರಿಗೆ ನೀಡುವ ಅತ್ಯುನ್ನತ ಕ್ರಿಸ್ಮಸ್ ಉಡುಗೊರೆ ಎಂದು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.

ಎರಡು ಸಾವಿರ ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಕ್ರಿಸ್ಮಸ್ ಎಂಬ ಅದ್ಭುತ ಒಂದು ನಿರ್ದಿಷ್ಟ ಕಾಲ ಮತ್ತು ಸ್ಥಳಕ್ಕೆ ಮಾತ್ರ ಸೀಮಿತವಾದುದಲ್ಲ, ಬದಲಾಗಿ ಇದು ಇಂದಿಗೂ ಪ್ರತಿಯೊಬ್ಬರ ಮನೆ ಯಲ್ಲೂ-ಮನದಲ್ಲೂ, ಪ್ರತಿಯೊಂದು ದಿನದಲ್ಲೂ ನಡೆಯುವಂತದ್ದಾಗಿದೆ. ಇದೇ ಈ ಮಹಾನ್ ಅದ್ಬುತದ ವೈಶಿಷ್ಟ್ಯ ಎಂದು ಅವರು ತಮ್ಮ ಕ್ರಿಸ್ಮಸ್ ಸಂದೇಶದಲ್ಲಿ ತಿಳಿಸಿದ್ದಾರೆ.

ಜಗತ್ತಿನಾದ್ಯಂತ ವಿಶೇಷ ಸಂಭ್ರಮದ ಹಬ್ಬವಾಗಿರುವ ಕ್ರಿಸ್ಮಸ್ ಮನುಜಕುಲಕ್ಕೆ ದೇವರ ಪ್ರೀತಿಯ ಅಗಾಧತೆಯನ್ನು ತಿಳಿಸುವ, ಶಾಂತಿ ಸಂದೇಶವನ್ನು ಸಾರುವ ಹಬ್ಬ. ದೇವರೊಂದಿಗಿನ ಆತ್ಮೀಯ ಸಂಬಂಧದಿಂದ ದೂರವಾದ ಮಾನವನನ್ನು ಮತ್ತೆ ತನ್ನೊಂದಿಗಿನ ಸಂಬಂಧದಲ್ಲಿ ಐಕ್ಯಗೊಳಿಸಲು ದೇವರು ಆರಿಸಿದ ವಿಶಿಷ್ಟ ವಿಧಾನವೇ ಈ ಧರೆಗೆ ಯೇಸುವಿನ ಆಗಮನ ಹಾಗೂ ಕ್ರಿಸ್ತನ ಜನನ.

ಕ್ರಿಸ್ಮಸ್ ಹಬ್ಬಕ್ಕೆ ಸಂಬಂಧಿಸಿದ ವಿವಿಧ ಆಚರಣೆಗಳ ಸಂಕೇತಗಳಾದ ಮಿನುಗುವ ದೀಪಗಳು, ನಕ್ಷತ್ರಗಳು, ಕ್ರಿಸ್‌ಮಸ್ ವೃಕ್ಷದಲ್ಲಿ ಝಗಮಗಿಸುವ ಬಣ್ಣದ ದೀಪಗಳು ದೇವರ ಬೆಳಕಾಗಿದೆ. ಇನ್ನು ಅಂಧಕಾರಕ್ಕೆ ಎಡೆಯಿಲ್ಲ ಎಂಬ ಸತ್ಯವನ್ನು ತಿಳಿಸಿ ಕ್ರಿಸ್ತರು ಅಜ್ಞಾನದ, ಪಾಪದ ಹಾಗೂ ಶೋಷಣೆಯ ಅಂಧಕಾರ ವನ್ನು ಹೋಗಲಾಡಿಸುವ ವಿಮೋಚಕ ಎಂಬುದನ್ನು ಪ್ರತಿಬಿಂಬಿಸುತ್ತವೆ.

ಪರಮಾತ್ಮನು ಮಾನವರಲ್ಲಿ ಶಾಂತಿ, ಪ್ರೀತಿ, ಐಕ್ಯತೆ ಸೌಹಾರ್ದವನ್ನು ಬಯಸುತ್ತಾನೆ ಎಂದು ತೋರಿಸಲು ಯೇಸುಸ್ವಾಮಿ ಮನುಷ್ಯರಾಗಿ ಜನಿಸಿದರು. ಕ್ರಿಸ್ತ ಜಯಂತಿ ಹಬ್ಬದ ಆಚರಣೆಯಲ್ಲಿ ಜಗತ್ತಿನಾದ್ಯಂತ ವೈವಿಧ್ಯವಿದ್ದರೂ ಸಂದೇಶದಲ್ಲಿ ಮಾತ್ರ ಏಕತೆಯಿದೆ. ಅವರು ಶಾಂತಿ, ಪ್ರೀತಿ, ಸಹಕಾರ, ಸೌಹಾರ್ದತೆಗಳ ಸಾಕಾರ ಮೂರ್ತಿ ಎಂಬುದನ್ನು ಕ್ರಿಸ್ಮಸ್ ಸಾರುತ್ತದೆ. ವಿವಿಧ ರೀತಿಯ ಶೋಷಣೆ, ಭಯ, ಕಳವಳ, ಹಿಂಸೆ, ಗಲಭೆ, ಅಸಮಾನತೆಯ ವಾತಾವರಣದಲ್ಲಿ ಯೇಸು ಕ್ರಿಸ್ತನ ಶಾಂತಿ-ಪ್ರೀತಿಯ ಸಂದೇಶ ಸಾರುವ ಕ್ರಿಸ್ಮಸ್ ಹಬ್ಬವನ್ನು ಆಚರಿಸುವುದು ಹೆಚ್ಚು ಅರ್ಥಪೂರ್ಣ ಎಂದರು.

ಮನುಷ್ಯತ್ವ ಮರೀಚಿಕೆಯಾದಂತೆ ಬಾಸವಾಗುತ್ತಿರುವ ಪ್ರಸ್ತುತ ಸಮಾಜದಲ್ಲಿ ಯೇಸು ಕ್ರಿಸ್ತರ ಜಯಂತಿ ಮನುಜಕುಲದ ಹಿರಿಮೆ, ಸ್ವಾತಂತ್ರ್ಯ, ಶಾಂತಿ, ಭಾವೈಕ್ಯತೆ ಹಾಗೂ ನೈತಿಕತೆಯನ್ನು ಜ್ಞಾಪಿಸುವ, ಎತ್ತಿ ಹಿಡಿಯುವ ಶ್ರೇಷ್ಟ ಸಂದರ್ಭವಾಗಿದೆ. ಎಲ್ಲರಿಗೂ ಕ್ರಿಸ್ತ ಜಯಂತಿ ಹಬ್ಬದ ಹಾರ್ದಿಕ ಶುಭಾಶಯ ಗಳು ಎಂದು ಅವರು ಹೇಳಿಕೆಯಲ್ಲಿ ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News