×
Ad

ಉಡುಪಿ ಜಿಲ್ಲೆಯಲ್ಲಿ ಸಂಭ್ರಮದ ಕ್ರಿಸ್ಮಸ್ ಆಚರಣೆ

Update: 2018-12-24 22:25 IST

ಉಡುಪಿ, ಡಿ.24: ಏಸುಕ್ರಿಸ್ತರ ಜನ್ಮದಿನವಾದ ಕ್ರಿಸ್ಮಸ್ ಹಬ್ಬವನ್ನು ಜಿಲ್ಲೆಯ ಕ್ರೈಸ್ತ ಬಾಂಧವರು ಉಡುಪಿ ಜಿಲ್ಲೆಯಾದ್ಯಂತ ಸೋಮವಾರ ರಾತ್ರಿ ಭಕ್ತಿ, ಶೃದ್ಧೆ, ಸಂಭ್ರಮ ಸಡಗರದಿಂದ ಆಚರಿಸಿದರು.

ಸೋಮವಾರ ರಾತ್ರಿ ಜಿಲ್ಲೆಯ ಎಲ್ಲಾ ಚರ್ಚುಗಳಲ್ಲಿ ವಿಶೇಷ ಪ್ರಾರ್ಥನೆ, ಕ್ರಿಸ್ಮಸ್ ಗೀತೆಗಳ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಹಬ್ಬದ ವಿಶೇಷ ಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಅ. ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ ಅವರು ತಮ್ಮ ಅಧಿಕೃತ ಚರ್ಚ್ ಆದ ಕಲ್ಯಾಣಪುರದ ಮಿಲಾಗ್ರಿಸ್ ಕೆಥೆಡ್ರಲ್‌ನಲ್ಲಿ ಅರ್ಪಿಸಿ ಹಬ್ಬದ ಸಂದೇಶವನ್ನು ನೀಡಿದರು.

ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಇಡೀ ಜಿಲ್ಲೆಯ ಚರ್ಚುಗಳು ವರ್ಣಮಯ ವಿದ್ಯುತ್ ದೀಪಾಲಂಕಾರ ಹಾಗೂ ಬಗೆಬಗೆಯ ಚಿತ್ತಾಕರ್ಷಕ ನಕ್ಷತ್ರಗಳಿಂದ ಕಂಗೊಳಿಸುತ್ತಿವೆ. ಉಡುಪಿ ಜಿಲ್ಲೆಯ ಪ್ರಮುಖ ದೇವಾಲಯಗಳು ಭಕ್ತಾದಿ ಗಳಿಂದ ತುಂಬಿ ತುಳುಕುತ್ತಿದ್ದವು.

ಸೋಮವಾರ ರಾತ್ರಿ ಪೂಜೆಯ ವೇಳೆ ಸಿಂಗರಿಸಿಟ್ಟ ಗೋದಲಿಯಲ್ಲಿ ಬಾಲ ಯೇಸುಮೂರ್ತಿಯನ್ನು ಇಟ್ಟು ದೇವರ ಸ್ತುತಿ, ಜೋಗುಳದ ಮೂಲಕ ಭಕ್ತಾದಿಗಳು ಆರಾಧಿಸಿದರು. ಮೇಣದ ಬತ್ತಿಗಳನ್ನು ಬೆಳಗಿ ಹೂವು ಸುಗಂಧ ಗಳನ್ನು ಅರ್ಪಿಸುವುದರ ಮೂಲಕ ಯೇಸು ಸ್ವಾಮಿಯ ಜನನವನ್ನು ಕ್ರೈಸ್ತ ಬಾಂಧವರು ಸ್ವಾಗತಿಸಿದರು.

ಜಿಲ್ಲೆಯ ಪ್ರಮುಖದ ಚರ್ಚುಗಳಾದ ಶಿರ್ವ ಆರೋಗ್ಯ ಮಾತೆಯ ದೇವಾಲಯದಲ್ಲಿ ಧರ್ಮಗುರು ವಂ.ಡೆನಿಸ್ ಡೇಸಾ, ಉಡುಪಿ ಶೋಕಮಾತಾ ಇಗರ್ಜಿಯಲ್ಲಿ ಧರ್ಮಗುರು ವಂ.ವಲೇರಿಯನ್ ಮೆಂಡೊನ್ಸಾ, ಕುಂದಾಪುರ ಹೋಲಿ ರೋಸರಿ ಚರ್ಚ್‌ನಲ್ಲಿ ವಂ.ಸ್ಟ್ಯಾನಿ ತಾವ್ರೊ, ಕಾರ್ಕಳದ ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾದಲ್ಲಿ ವಂ.ಜೋರ್ಜ್ ಡಿಸೋಜಾ ಇವರುಗಳ ನೇತೃತವದಲ್ಲಿ ಕ್ರಿಸ್ಮಸ್ ಆಚರಣೆಯ ಬಲಿಪೂಜೆಗಳು ನಡೆದವು.

ಹಬ್ಬದ ಅಂಗವಾಗಿ ಹೆಚ್ಚಿನ ಚರ್ಚುಗಳಲ್ಲಿ ಯುವ ಸಂಘಟನೆಯ ಸದಸ್ಯ ರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ, ಮಕ್ಕಳ ಪ್ರೀತಿಗೆ ಪಾತ್ರನಾದ ಸಾಂತಾಕ್ಲಾಸ್ ವೇಷ, ಭಕ್ತಾದಿಗಳಿಗೆ ಕ್ರಿಸ್ಮಸ್ ಕೇಕ್ ವಿತರಣೆ ಕೂಡ ನಡೆಯಿತು. ಬಲಿಪೂಜೆಯ ಬಳಿಕ ಕ್ರೈಸ್ತ ಬಾಂಧವರು ಪರಸ್ಪರ ಕ್ರಿಸ್ಮಸ್ ಹಬ್ಬದ ಶುಭಾಶಯ ಗಳನ್ನು ವಿನಿಮಯ ಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News