×
Ad

ಮಣಿಪಾಲ: ಸಿಂಡ್ ಬ್ಯಾಂಕ್ ನೌಕರರಿಂದ 500 ಕೋಟಿ ರೂ.ಬಂಡವಾಳ ಸಂಗ್ರಹ ಗುರಿ

Update: 2018-12-24 22:31 IST

ಮಣಿಪಾಲ, ಡಿ.24: ಸಿಂಡಿಕೇಟ್ ಬ್ಯಾಂಕ್ ತನ್ನ ನೌಕರರಿಗೆ ರಿಯಾಯಿತಿ ದರದಲ್ಲಿ ಶೇರುಗಳನ್ನು ನೀಡುವ ಮೂಲಕ ಒಟ್ಟು 500 ಕೋಟಿ ರೂ.ಬಂಡವಾಳವನ್ನು ಸಂಗ್ರಹಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಸಿಂಡಿಕೇಟ್ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಸಿಇಓ ಮೃತ್ಯುಂಜಯ ಮಹಾಪಾತ್ರ ಹೇಳಿದ್ದಾರೆ.

ಮಣಿಪಾಲದ ಸಿಂಡಿಕೇಟ್ ಬ್ಯಾಂಕ್ ಗೋಲ್ಡನ್ ಜ್ಯುಬಿಲಿ ಸಭಾಂಗಣದಲ್ಲಿ ಸೋಮವಾರ ಸಂಜೆ ಕರೆಯಲಾದ ಸಿಂಡಿಕೇಟ್ ಬ್ಯಾಂಕ್ ನೌಕರರ ವಿಶೇಷ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು. ಕೇಂದ್ರ ಸರಕಾರದ ಅನುಮತಿಯೊಂದಿಗೆ ನೌಕರರ ಶೇರು ಸಂಗ್ರಹ ಯೋಜನೆಯಡಿಯಲ್ಲಿ ಸಿಂಡಿಕೇಟ್ ಬ್ಯಾಂಕಿನ ನೌಕರರಿಗೆ ಶೇ.20ರಿಂದ 25 ರಷ್ಟು ರಿಯಾಯಿತಿ ದರದಲ್ಲಿ ಶೇರುಗಳನ್ನು ಮಾರಾಟ ಮಾಡುವ ಮೂಲಕ ಸುಮಾರು 500 ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿ ಇದಾಗಿದೆ. ಇದು ಈಗ ಯೋಜನೆಯ ಹಂತದಲ್ಲಿದೆ. ಇದಕ್ಕಾಗಿ ತಾವು ದೇಶದ ಎಲ್ಲಾ ಕಡೆಗಳಲ್ಲಿ ಸಿಂಡಿಕೇಟ್ ಬ್ಯಾಂಕ್ ನೌಕರರ ಸಭೆಗಳನ್ನು ಕರೆದು ಅವರೊಂದಿಗೆ ಈ ಕುರಿತು ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುವುದಾಗಿ ಮಹಾಪಾತ್ರ ತಿಳಿಸಿದರು.

ಸಿಂಡಿಕೇಟ್ ಬ್ಯಾಂಕ್‌ನ ಆರ್ಥಿಕ ಸ್ಥಿತಿ ಈಗ ಚೆನ್ನಾಗಿಲ್ಲ. ಸೆಪ್ಟಂಬರ್ ತಿಂಗಳ ಕೊನೆಗೆ ನಮ್ಮ ಅನುತ್ಪಾದಕ ಆಸ್ತಿಯ ಪ್ರಮಾಣ ಶೇ.12ಕ್ಕಿಂತ ಹೆಚ್ಚಿದೆ. ರಿಸರ್ವ್ ಬ್ಯಾಂಕಿನ ಮಾರ್ಗದರ್ಶಿ ಸೂತ್ರದಂತೆ ಅದು ಶೇ.6ಕ್ಕಿಂತ ಕಡಿಮೆ ಇರಬೇಕಾಗಿದೆ. ಕೇಂದ್ರ ಸರಕಾರದ ನೆರವಿನಿಂದ ಮುಂದಿನ ಮಾರ್ಚ್ ವೇಳೆಗೆ ಎನ್‌ಪಿಎಯನ್ನು ಶೇ.6ಕ್ಕಿಂತ ಕಡಿಮೆಗೊಳಿಸುವ ವಿಶ್ವಾಸ ನಮಗಿದೆ ಎಂದು ಮೃತ್ಯುಂಜಯ ಮಹಾಪಾತ್ರ ನುಡಿದರು.

ಇತ್ತೀಚೆಗೆ ಕೇಂದ್ರ ಸರಕಾರ ಸಿಂಡಿಕೇಟ್ ಬ್ಯಾಂಕಿಗೆ 728 ಕೋಟಿ ರೂ.ಗಳ ಬಂಡವಾಳದ ನೆರವು ನೀಡಿದೆ. ಇದರಿಂದ ನಮ್ಮ ಆರ್ಥಿಕ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ಮುಂಬರುವ ದಿನಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಕೇಂದ್ರ ಇನ್ನಷ್ಟು ಅನುದಾನದ ಮೂಲಕ ನೆರವು ನೀಡುವ ನಿರೀಕ್ಷೆ ಇದೆ. ಇದಕ್ಕಾಗಿ ಕೇಂದ್ರ, ಸಂಸತ್ತಿನಲ್ಲಿ ಮಸೂದೆಯೊಂದನ್ನು ಮಂಡಿಸಿದೆ. ಈ ಮೂಲಕ ಸಿಂಡಿಕೇಟ್ ಬ್ಯಾಂಕ್, ಆರ್‌ಬಿಐನ ಎಲ್ಲಾ ಗೈಡ್‌ಲೈನ್‌ನ್ನು ಪಾಲಿಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.

ಕಚೇರಿ ಸಾಂಕೇತಿಕ: ಉಡುಪಿ-ಮಣಿಪಾಲಗಳಲ್ಲಿ ಹುಟ್ಟಿದ ಸಿಂಡಿಕೇಟ್ ಬ್ಯಾಂಕಿನ ಪ್ರಧಾನ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸುವ ಪ್ರಸ್ತಾಪವಿದೆಯೇ ಎಂದು ಎಂಡಿ ಮಹಾಪಾತ್ರರನ್ನು ಪ್ರಶ್ನಿಸಿದಾಗ, ಮಣಿಪಾಲ ದಲ್ಲಿ ಬ್ಯಾಂಕ್ ಸ್ಥಾಪನೆಯಾಗಿರುವುದರಿಂದ ನಮ್ಮ ಹೃದಯದ ಮೂಲೆಯಲ್ಲಿ ಈ ಬಗ್ಗೆ ಅಭಿಮಾನವಿದೆ. ಆದರೆ ಇಂದಿನ ಅಗತ್ಯಕ್ಕೆ ತಕ್ಕಂತೆ ತಲುಪುವಲ್ಲಿ ಮಣಿಪಾಲಕ್ಕೆ ಅದರದೇ ಆದ ಮಿತಿಗಳಿವೆ ಎಂದವರು ತಿಳಿಸಿದರು.

ಬ್ಯಾಂಕ್ ಆರ್ಥಿಕ ಮಾರುಕಟ್ಟೆಗೆ, ಜಾಗತಿಕ ಮಾರುಕಟ್ಟೆಗೆ ಹಾಗೂ ಐಟಿ ಮಾರುಕಟ್ಟೆಯನ್ನು ತಲುಪಬೇಕಿದ್ದರೆ ಮಣಿಪಾಲಕ್ಕಿಂತ ಬೆಂಗಳೂರು ಹೆಚ್ಚು ಪ್ರಶಸ್ತವಾಗಿದೆ. ಹೀಗಾಗಿಯೇ ಕೆಲ ವರ್ಷಗಳ ಹಿಂದೆ ಬ್ಯಾಂಕಿನ ಕಾರ್ಪೋರೇಟ್ ಕಚೇರಿಯನ್ನು ಬೆಂಗಳೂರಿಗೆ ವರ್ಗಾಯಿಸಲಾಗಿದೆ. ಸದ್ಯಕ್ಕೆ ಸಾಂಕೇತಿಕವಾಗಿ ಕೆಲವನ್ನು ಮಾತ್ರ ಇಲ್ಲಿ ಉಳಿಸಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಅವರು ನುಡಿದರು.

ಸಿಂಡಿಕೇಟ್ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಕೃಷ್ಣನ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಬ್ಯಾಂಕಿನ ಜನರಲ್ ಮ್ಯಾನೇಜರ್ ಭಾಸ್ಕರ ಹಂದೆ ಅವರು ಅತಿಥಿಗಳನ್ನು ಸ್ವಾಗತಿಸಿ, ಬ್ಯಾಂಕಿನ ಮಣಿಪಾಲ ವಲಯದ ಸಾಧನೆಗಳ ಪಕ್ಷಿನೋಟವನ್ನು ವಿವರಿಸಿದರು.

ಇದೇ ಸಂದರ್ಭದಲ್ಲಿ ಯುವ ಉದ್ದಿಮೆದಾರರಾದ ಸುದೀಪ್ ರಾಟೋ ಅವರನ್ನು ಮೃತ್ಯುಂಜಯ ಮಹಾಪಾತ್ರ ಸನ್ಮಾನಿಸಿದರು. ಬ್ಯಾಂಕಿನ ಹಿರಿಯ ಅಧಿಕಾರಿ ಹಿರೇಮಠ್ ವಂದಿಸಿದರೆ, ಶಂಕರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News