ರಾಜ್ಯ ಸರಕಾರದ ಆಡಳಿತ ವೈಫಲ್ಯ ಬೆಳಗಾವಿ ಅಧಿವೇಶನದಲ್ಲಿ ಸಾಬೀತು: ಕೋಟ ಶ್ರೀನಿವಾಸ ಪೂಜಾರಿ

Update: 2018-12-24 17:16 GMT

ಉಡುಪಿ, ಡಿ.24: ರಾಜ್ಯ ಸಮ್ಮಿಶ್ರ ಸರಕಾರ ಬರ ಪರಿಹಾರ, ಸಾಲಮನ್ನಾ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಂಪೂರ್ಣ ವಿಫಲವಾಗಿದೆ ಎಂಬುದನ್ನು ಬೆಳಗಾವಿ ಚಳಿಗಾಲದ ಅಧಿವೇಶನ ಸಾಬೀತು ಪಡಿಸಿದೆ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ರಾಜ್ಯದ 17 ಜಿಲ್ಲೆಗಳು ಹಾಗೂ 100ಕ್ಕೂ ಅಧಿಕ ತಾಲೂಕುಗಳು ಬರದಿಂದ ತತ್ತರಿಸಿ ಹೋಗಿವೆ. ಈ ತಾಲೂಕುಗಳಿಗೆ ಬರ ಪರಿಹಾರ ನೀಡುವಲ್ಲಿ ಸರಕಾರ ವೈಫಲ್ಯತೆಯನ್ನು ಕಂಡಿದೆ ಎಂದು ಟೀಕಿಸಿದರು.

ರೈತರ 53 ಸಾವಿರ ಕೋಟಿ ರೂ. ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಿದ್ದ ಸರಕಾರ ಅದನ್ನು 34ಸಾವಿರ ಕೋಟಿ ರೂ.ಗೆ ಇಳಿಸಿತು. ಕಳೆದ ಬಜೆಟ್ ನಲ್ಲಿ 6.5ಸಾವಿರ ಕೋಟಿ ತೆಗೆದಿರಿಸಿದ ಸರಕಾರ, 800 ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ಘೋಷಿಸಿತು. ಆದರೆ ಸರಕಾರ ಈವರೆಗೆ ಕೇವಲ 2.92 ಕೋಟಿ ರೂ. ರೈತರ ಖಾತೆಗೆ ಜಮೆ ಮಾಡಿ, ಹಲವು ನಿಬಂಧನೆಗಳನ್ನು ವಿಧಿಸಿತು. ರೈತರ ಸಾಲಮನ್ನಾ ಎಂಬುದು ಕಣ್ಣೊರೆಸುವ ತಂತ್ರವಾಗಿದೆ ಎಂದು ಅವರು ದೂರಿದರು.

ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ಎದುರಿಸಲಾಗದ ಸರಕಾರ ಅಧಿವೇಶನದಲ್ಲಿ ಟಿಪ್ಪು ಜಯಂತಿ ವಿಷಯದಿಂದ ನುಣುಚಿಕೊಂಡಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿ 1800 ಕೊಳವೆ ಬಾವಿಗಳನ್ನು ಮಂಜೂರು ಮಾಡಿರುವುದು ಮತ್ತು ಕೊಳವೆ ಬಾವಿ ಮಾಡದೆ ಹಣ ಲಪಟಾಯಿಸಿರುವ ವಿಚಾರದಲ್ಲಿ ತನಿಖೆ ಮಾಡಬೇಕೆಂದು ಸದನದಲ್ಲಿ ಧರಣಿ ನಡೆಸಿದಾಗ ಸರಕಾರ ಚರ್ಚೆಯಿಂದ ಹಿಂಜರಿಯಿತು ಎಂದರು.

ಅನ್ವರ್ ಮಾಣಿಪ್ಪಾಡಿ ವರದಿ ಮಂಡಿಸಲು ಸದನದಲ್ಲಿ ಮುಖ್ಯಮಂತ್ರಿ ಹಾಗೂ ಕಾನೂನು ಸಂಸದೀಯ ಸಚಿವರು ಕೊಟ್ಟ ಭರವಸೆಯನ್ನು ಈಡೇರಿಸಿಲ್ಲ. ಬಾಪೂಜಿ ಕೇಂದ್ರದಲ್ಲಿ ಸರಕಾರ ವಿಫಲತೆ, ಸುಲ್ವಾಡಿ ದೇವಸ್ಥಾನ ಪ್ರಸಾದ ದುರಂತ ಪ್ರಕರಣ ಸಂಭವಿಸಲು ಸರಕಾರ ನಿರ್ಲಕ್ಷ್ಯ ಕಾರಣ ಹಾಗೂ ಪೊಲೀಸರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕೊಟ್ಟ ಸಮಯವನ್ನು ಕೊನೆಗಳಿಗೆಯಲ್ಲಿ ಸರಕಾರ ಕೈಬಿಟ್ಟಿರುವ ಕ್ರಮ ಖಂಡನೀಯ ಎಂದು ಕೋಟ ಶ್ರೀನಿವಾಸ ಪೂಜಾರಿ ಕಟುವಾಗಿ ಟೀಕಿಸಿದರು.

ಮಟ್ಟು ಹೇಳಿಕೆಯಿಂದ ಹಿಂದೂ ಧರ್ಮಕ್ಕೆ ನೋವು
ಪೇಜಾವರ ಸ್ವಾಮೀಜಿಗೆ ಅರಳು ಮರಳು ಎಂಬ ದಿನೇಶ್ ಅಮೀನ್ ಮಟ್ಟು ಅವರ ಹೇಳಿಕೆ ಹಿಂದೂ ಧರ್ಮಕ್ಕೆ ನೋವು ತಂದಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದ್ದಾರೆ.

ಪೇಜಾವರ ಸ್ವಾಮೀಜಿ ಸನ್ಯಾಸ ಸ್ವೀಕರಿಸಿ 80 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಹಮ್ಮಿಕೊಂಡಿರುವ ರಾಷ್ಟ್ರಪತಿ ಕಾರ್ಯಕ್ರಮದ ಸಂದರ್ಭದಲ್ಲಿ ದಿನೇಶ್ ಅಮೀನ್ ಮಟ್ಟು, ಪೇಜಾವರ ಸ್ವಾಮೀಜಿಗೆ ಅರಳುಮರಳು ಎಂದು ಹೇಳಿರುವುದು ಹಿಂದೂ ಧರ್ಮ ಮತ್ತು ನಮಗೆಲ್ಲ ನೋವಾಗಿದೆ. ಇವರಿಗೆ ಹಿಂದೂ ಧರ್ಮವನ್ನು ಅವಹೇಳನ ಮಾಡುವ ಓವೈಸಿಯಂತವರು ಶ್ರೇಷ್ಠ ವ್ಯಕ್ತಿಗಳಾಗುತ್ತಾರೆ ಎಂದು ಅವರು ಕಿಡಿಕಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News