ಬೆಳ್ತಂಗಡಿ ವಕೀಲರ ಸಂಘದಿಂದ ಹಿರಿಯ ವಕೀಲ ನೇಮಿರಾಜ ಶೆಟ್ಟರಿಗೆ ಗೌರವಾರ್ಪಣೆ
ಬೆಳ್ತಂಗಡಿ, ಡಿ. 26: ನಾವು ಯಾವುದೇ ವೃತ್ತಿಯನ್ನು ಮಾಡುವುದಾದರೂ ಹಿರಿಯರ ಮಾರ್ಗದರ್ಶನದ ಜತೆಗೆ ಜ್ಞಾನವನ್ನು ಪಡೆದಾಗ ಯಶಸ್ಸನ್ನು ಸಾಧಿಸಬಹುದು. ವೃತ್ತಿಯಿಂದ ನಿವೃತ್ತಿ ಹೊಂದುತ್ತಿರುವ ಹಿರಿಯರಾದ ನೇಮಿರಾಜ ಶೆಟ್ಟರು ಕಿರಿಯ ವಕೀಲರಿಗೆ ಹಾಕಿಕೊಟ್ಟ ಆದರ್ಶ-ಮಾರ್ಗದರ್ಶನ ಅನನ್ಯವಾದುದು ಎಂದು ಬೆಳ್ತಂಗಡಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶೆ ಬಿ.ಕೆ. ಕೋಮಲ ಹೇಳಿದರು.
ಅವರು ಬುಧವಾರ ಬೆಳ್ತಂಗಡಿ ನ್ಯಾಯಾಲಯದಲ್ಲಿ ಇಲ್ಲಿನ ವಕೀಲರ ಸಂಘದ ವತಿಯಿಂದ ಕಳೆದ 53 ವರ್ಷಗಳಿಂದ ವಕೀಲರಾಗಿದ್ದ ವೃತ್ತಿಯಿಂದ ನಿವೃತ್ತ ರಾಗುತ್ತಿರುವ ಹಿರಿಯ ವಕೀಲ ನೇಮಿರಾಜ ಶೆಟ್ಟಿ ಅವರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿರಿಯರ ಮಾರ್ಗದರ್ಶನ ಕಿರಿಯರಿಗೆ ಸದಾ ಇರಬೇಕು. ನೇಮಿರಾಜ ಶೆಟ್ಟಿರಿಂದ ಇಲ್ಲಿನ ಆಚಾರ, ವಿಚಾರವನ್ನು, ಜಿಲ್ಲೆಯ ಮಾಹಿತಿಯನ್ನು ತಿಳಿದು ಕೊಂಡಿದ್ದೇನೆ. ಇವರಿಂದ ಪಡೆದುಕೊಂಡ ಜ್ಞಾನ ನನಗೆ ಸಹಕಾರಿಯಾಗಿದೆ ಎಂದ ಅವರು, ವೃತ್ತಿಯಿಂದ ನಿವೃತ್ತಿಯಾದರೂ ಕಿರಿಯ ವಕೀಲರಿಗೆ ನಿಮ್ಮ ಮಾರ್ಗದರ್ಶನ ಅಗತ್ಯ ಎಂದರು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಹಿರಿಯ ವಕೀಲ ನೇಮಿರಾಜ ಶೆಟ್ಟಿ ಅವರು, ನಾವು ಮಾಡುವ ವೃತ್ತಿಯಲ್ಲಿ ನಿಯತ್ತು ಇರಬೇಕು. ಅಹಂ, ದರ್ಪವನ್ನು ಪ್ರದರ್ಶಿಸದೆ ಜನಸಾಮಾನ್ಯರ ನೋವಿಗೆ ಸ್ಪಂದಿಸುವಂತಹ ಮನೋಧರ್ಮವನ್ನು ಬೆಳೆಸಿಕೊಳ್ಳಬೇಕು. ನಮ್ಮ ಜ್ಞಾನವನ್ನು ವೃದ್ಧಿಸಿಕೊಂಡು, ನಮ್ಮ ಕಕ್ಷಿದಾರರಿಗೆ ನ್ಯಾಯವನ್ನು ದೊರಕಿಸಿಕೊಡಬೇಕು. ಶಿಸ್ತು, ಸಮಯ ಪಾಲನೆ, ತಾಳ್ಮೆ, ಜಾಣ್ಮೆಯೊಂದಿಗೆ ವೃತ್ತಿಯನ್ನು ಮಾಡಿದಾಗ ನಾವು ಯಶಸ್ಸನ್ನು ಪಡೆಯಬಹುದು ಎಂದ ಅವರು, 53 ವರ್ಷಗಳಿಂದ ಇಲ್ಲಿ ಕಳೆದ ಸಮಯ ನನಗೆ 53 ಗಂಟೆಯಂತೆ ಅನ್ನಿಸುತ್ತದೆ. ಮನೆಯ ವಾತಾವರಣದಂತಿದ್ದ ಇಲ್ಲಿನ ಬಾರ್ ಎಸೋಸಿಯೇಶನ್ ಎಲ್ಲಿಯೂ ಕಾಣಲು ಸಾಧ್ಯವಿಲ್ಲ. ನೀವು ನೀಡಿರುವ ಪ್ರೀತಿ, ಸಹಕಾರಕ್ಕೆ ನಾನು ಋಣಿ ಎಂದರು.
ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಕ್ಸೇವಿಯರ್ ಪಾಲೇಲಿ ಶುಭಹಾರೈಸಿದರು. ಎಪಿಪಿ ಜಿ.ಕೆ. ಕಿರಣ್ ಕುಮಾರ್, ಹಿರಿಯ ವಕೀಲರ ಸಂಘದ ಅಧ್ಯಕ್ಷ ಶಶಿಕಿರಣ್ ಜೈನ್ ಹಾಗೂ ನೇಮಿರಾಜ ಶೆಟ್ಟರ ಕುಟುಂಬಸ್ಥರು ಉಪಸ್ಥಿತರಿದ್ದರು. ವಕೀಲರಾದ ಬಿ.ಕೆ.ಧನಂಜಯ ರಾವ್, ಜೆ.ಕೆ.ಪೌಲ್, ಚಿದಾನಂದ ಹಾಗೂ ನೇಮಿರಾಜ ಶೆಟ್ಟರ ಪುತ್ರಿ, ಜಿಲ್ಲಾ ನ್ಯಾಯಾಧೀಶೆ ಉಷಾರಾಣಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭ ವೃತ್ತಿಯಿಂದ ನಿವೃತ್ತರಾಗುತ್ತಿರುವ ನೇಮಿರಾಜ ಶೆಟ್ಟಿ ಅವರು ಬೆಳ್ತಂಗಡಿ ವಕೀಲರ ಸಂಘಕ್ಕೆ ರೂ. ಐವತ್ತು ಸಾವಿರವನ್ನು ದೇಣಿಗೆಯಾಗಿ ನೀಡಿದರು. ಸಂಜನಾ ಜೈನ್ ಪ್ರಾರ್ಥಿಸಿದರು. ವಕೀಲರ ಸಂಘದ ಕಾರ್ಯದರ್ಶಿ ಮನೋಹರ್ ಇಳಂತಿಲ ಸ್ವಾಗತಿಸಿ, ಕೋಶಾಧಿಕಾರಿ ಶ್ರೀನಿವಾಸ ಗೌಡ ವಂದಿಸಿದರು. ವಕೀಲ ಶೈಲೇಶ್ ಠೋಸರ್ ಕಾರ್ಯಕ್ರಮ ನಿರ್ವಹಿಸಿದರು.