ಮೆಕ್ಸಿಕೋ ಗಡಿಯಲ್ಲಿ ವಶಕ್ಕೆ ಪಡೆಯಲಾಗಿದ್ದ ಬಾಲಕ ಅಮೆರಿಕ ಅಧಿಕಾರಿಗಳ ಕಸ್ಟಡಿಯಲ್ಲಿ ಮೃತ್ಯು

Update: 2018-12-26 16:49 GMT

ನ್ಯೂಯಾರ್ಕ್, ಡಿ.26: ಅಮೆರಿಕಾದ ಕಸ್ಟಮ್ಸ್ ಮತ್ತು ಗಡಿ ರಕ್ಷಣಾ ಇಲಾಖೆಯ ವಶದಲ್ಲಿದ್ದ 8 ವರ್ಷದ ಗ್ವಾಟೆಮಾಲ ಮೂಲದ ಬಾಲಕ ಅಸೌಖ್ಯದಿಂದ ಮೃತಪಟ್ಟಿದ್ದಾನೆ.

ಅಮೆರಿಕಾದ ಗಡಿಯನ್ನು ಪ್ರವೇಶಿಸಲೆತ್ನಿಸುತ್ತಿದ್ದ ಬಾಲಕ ಮತ್ತಾತನ ತಂದೆಯನ್ನು ಇಲ್ಲಿನ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ನ್ಯೂ ಮೆಕ್ಸಿಕೋದ ಅಲಮೊಗೊರ್ಡೊ ಎಂಬಲ್ಲಿರುವ ಗೆರಾಲ್ಡ್ ಚಾಂಪಿಯನ್ ರೀಜನಲ್ ಮೆಡಿಕಲ್ ಸೆಂಟರ್ ನಲ್ಲಿ ಬಾಲಕ ಮಂಗಳವಾರ ಮಧ್ಯರಾತ್ರಿಗಿಂತ ಸ್ವಲ್ಪ ಮೊದಲು ಸಾವನ್ನಪ್ಪಿದ್ದಾನೆ. ಮೃತ ಬಾಲಕನನ್ನು ಫೆಲಿಪ್ ಅಲೊನ್ಝೊ ಗೋಮೆಝ್ ಎಂದು ಗುರುತಿಸಲಾಗಿದೆ. ಅಮೆರಿಕಾದ ಕಸ್ಟಮ್ಸ್ ಮತ್ತು ಗಡಿ ರಕ್ಷಣಾ ಏಜನ್ಸಿಯ ವಶದಲ್ಲಿರುವಾಗ ಸಾವನ್ನಪ್ಪಿದ ಗ್ವಾಟೆಮಾಲಾದ ಎರಡನೇ ಬಾಲಕ ಈತನಾಗಿದ್ದಾನೆ.

ಬಾಲಕ ಅಸೌಖ್ಯದಿಂದಿರುವುದನ್ನು ಕಂಡು ಅಧಿಕಾರಿಯೊಬ್ಬರು ಆತನನ್ನು ಆಸ್ಪತ್ರೆಗೆ ಸೇರಿಸಿದ್ದರು. ಆರಂಭದಲ್ಲಿ ಸಾಮಾನ್ಯ ಶೀತವೆಂದು ತಿಳಿಯಲಾದರೂ ನಂತರ ಬಾಲಕನಿಗೆ ಜ್ವರ ಕಂಡು ಬಂದಿತ್ತು. ಆತನನ್ನು ಕೆಲವು ಗಂಟೆಗಳ ಕಾಲ ನಿಗಾದಲ್ಲಿರಿಸಿದ ನಂತರ ಸೋಮವಾರ ಅಪರಾಹ್ನ ಆಸ್ಪತ್ರೆಯಿಂದ ಔಷಧಿ ಚೀಟಿ ನೀಡಿ ಬಿಡುಗಡೆಗೊಳಿಸಲಾಗಿತ್ತು. ಆದರೆ ನಂತರ ಬಾಲಕ ವಾಂತಿ ಮಾಡಲಾರಂಭಿಸಿದ್ದರಿಂದ ಮತ್ತೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗಿಲ್ಲ.

ಈ ಹಿಂದೆ ಗ್ವಾಟೆಮಾಲಾದ ಏಳು ವರ್ಷದ ಬಾಲಕ ಜಾಕೆಲಿನ್ ಕಾಲ್ ಕೂಡ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದುಕೊಂಡ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದ್ದ. ಬಾಲಕರ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಟೆಕ್ಸಾಸ್ ಕಾಂಗ್ರೆಸ್ ನಾಯಕ ಜೋಕ್ವಿನ್ ಕಾಸ್ಟ್ರೋ ಆಗ್ರಹಿಸಿದ್ದಾರೆ.

ಗ್ಟಾಟೆಮಾಲಾದ ವಿದೇಶಾಂಗ ಸಚಿವಾಲಯವೂ ತನಿಖೆಗೆ ಕೋರಿದ್ದು ಬಾಲಕನ ವೈದ್ಯಕೀಯ ದಾಖಲೆಗಳನ್ನು ನೀಡುವಂತೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News