×
Ad

ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿಗೆ ಐಸಿಎಂಒ ಚಿಕಿತ್ಸೆ

Update: 2018-12-27 18:29 IST

ಬೆಂಗಳೂರು, ಡಿ.27: ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ಕರ್ನಾಟಕದ ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿಯವರಿಗೆ ರಕ್ತ ಸಂಚಾರ ಸರಾಗವಾಗಿ ಆಗಲು ಕೃತಕ ವ್ಯವಸ್ಥೆಯಾಗಿ ಇಸಿಎಂಒ ಚಿಕಿತ್ಸೆಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿದು ಬಂದಿದೆ. ಈಗ  ಅವರನ್ನು ಐಸಿಯುಗೆ ವರ್ಗಾಯಿಸಲಾಗಿದೆ ಎಂದು ಚಿಕಿತ್ಸೆಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ಎಡಿಜಿಪಿ ಪ್ರತಾಪ್ ರೆಡ್ಡಿಯವರನ್ನು ಉಲ್ಲೇಖಿಸಿ ಪೊಲೀಸ್ ಮೂಲಗಳು ಮಾಹಿತಿ ನೀಡಿದೆ. 

ಮಧುಕರ್ ಶೆಟ್ಟಿಯವರ ಆರೋಗ್ಯದ ಮೇಲ್ವಿಚಾರಣೆಗಾಗಿ ಕರ್ನಾಟಕ ಸರಕಾರ ಪ್ರತಾಪ್ ರೆಡ್ಡಿಯವರನ್ನು ಹೈದರಾಬಾದ್ ಗೆ ಕಳಿಸಿದ್ದು , ಅವರು ಅಲ್ಲಿನ ಕಾಂಟಿನೆಂಟಲ್ ಆಸ್ಪತ್ರೆಯ ವೈದ್ಯಕೀಯ ತಂಡ , ಮಧುಕರ್ ಅವರ ಕುಟುಂಬ ಹಾಗು ತೆಲಂಗಾಣ ಪೋಲೀಸರ ಜೊತೆ ಚಿಕಿತ್ಸೆಯ ಉಸ್ತುವಾರಿ ಹೊತ್ತುಕೊಂಡಿದ್ದಾರೆ. 

24x7 ಗಂಟೆಗಳ ಕಾಲ ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದ್ದು, ತೆಲಂಗಾಣ ಪೊಲೀಸರು ಮತ್ತು ಮಧುಕರ್ ಅವರ ಬ್ಯಾಚ್ ನ ಪೊಲೀಸರಾಗಿರುವ ಹೈದರಾಬಾದ್  ಐಜಿ ಸ್ಟೀಫನ್ ರವೀಂದ್ರ, ಸೈಬರಾಬಾದ್ ಕಮಿಷನರ್ ಸಜ್ಜನಾರ್ , ತೆಲಂಗಾಣ ಡಿಜಿಪಿ ಮಹೇಂದ್ರ ರೆಡ್ಡಿ ಸಂಪೂರ್ಣ ನೆರವು ನೀಡಿದ್ದಾರೆ. ರಾಷ್ಟ್ರೀಯ ಪೊಲೀಸ್ ಅಕಾಡಮಿಯ ಕೆಲ ಸಹೋದ್ಯೋಗಿಗಳು ಆಸ್ಪತ್ರೆಯಲ್ಲೇ ರಾತ್ರಿ ಹಗಲೆನ್ನದೆ ಕಾಯುತ್ತಿದ್ದು, ಕರ್ನಾಟಕ ರಾಜ್ಯ ಡಿಜಿ, ಐಜಿಪಿ ನೀಲಮಣಿ ರಾಜು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮಧುಕರ್ ಶೆಟ್ಟಿಯವರ ಆರೋಗ್ಯದ ಬಗ್ಗೆ ಡಾ.ದೇವಿ ಶೆಟ್ಟಿ ಮತ್ತವರ ತಂಡ ಬೆಂಗಳೂರಿನಿಂದ ಸೂಕ್ತ ಮಾರ್ಗದರ್ಶನ ನೀಡುತ್ತಿದೆ. ಮಧುಕರ್ ಶೆಟ್ಟಿಯವರು ಎಚ್ 1 ಎನ್ 1ನಿಂದ ಬಳಲುತ್ತಿರುವುದಾಗಿ ಈ ಹಿಂದೆ ವರದಿಯಾಗಿತ್ತು. ಆದರೆ ವೈದ್ಯರ ತಂಡ ಇದನ್ನು ನಿರಾಕರಿಸಿದ್ದು, ಹೃದಯ ಸಂಬಂಧಿ ಕಾಯಿಲೆಯಿಂದ ಮಧುಕರ್ ಶೆಟ್ಟಿ ಬಳಲುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News