ಹೊಗೆಬೈಲ್‌ನಲ್ಲಿ ಚೂರಿಯಿಂದ ಇರಿದು ಕೊಲೆಗೈದ ಪ್ರಕರಣ: ಅಪರಾಧಿಗೆ ಜೀವಾವಧಿ ಶಿಕ್ಷೆ
ಮಂಗಳೂರು, ಡಿ. 27: ನಗರದ ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಹೊಗೆಬೈಲ್‌ನಲ್ಲಿ ನಾಲ್ಕು ವರ್ಷ ಹಿಂದೆ ನಡೆದಿದ್ದ ಬೋಳೂರು ನಿವಾಸಿ ಸಂಜಯ್ ಯಾನೆ ವರುಣ್ (19) ಕೊಲೆ ಪ್ರಕರಣದ ಅಪರಾಧಿ ಹೊಗೆಬೈಲ್ ನಿವಾಸಿ ಅಶು ಯಾನೆ ಆಶ್ರಿತ್ (23)ಗೆ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
ದಂಡದ ಮೊತ್ತ ಪಾವತಿಸದಿದ್ದರೆ ಮತ್ತೆ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕು. ದಂಡದ ಮೊತ್ತದಲ್ಲಿ 90 ಸಾವಿರ ರೂ. ಕೊಲೆಯಾದ ಯುವಕನ ಪೋಷಕರಿಗೆ ನೀಡಬೇಕು. ಮೃತನ ಪೋಷಕರು ಕಾನೂನು ಪ್ರಾಧಿಕಾರದಿಂದಲೂ ಪರಿಹಾರ ಪಡೆಯಲು ಅರ್ಹರು ಎಂದು ನ್ಯಾಯಾಲಯ ಶಿಫಾರಸು ಮಾಡಿದೆ.
ಪ್ರಕರಣದ ಹಿನ್ನೆಲೆ: 2014ರ ಮೇ 22ರಂದು ಮಧ್ಯಾಹ್ನ 2 ಗಂಟೆಯ ವೇಳೆಗೆ ಅಶೋಕನಗರ ಮೋಡರ್ನ್ ರೈಸ್ ಮಿಲ್ ಸಮೀಪದ ಕಲ್ಲುರ್ಟಿ ದೈವಸ್ಥಾನ ಬಳಿ ಬೋಳೂರು ಜಾರಂದಾಯ ದೈವಸ್ಥಾನದ ಬಳಿಯ ನಿವಾಸಿ ಜನಾರ್ದನ ಅವರ ಪುತ್ರ ಸಂಜಯ್ ಯಾನೆ ವರುಣ್(19) ಎಂಬಾತನನ್ನು ಅಶ್ರಿತ್ ಹಳೇ ದ್ವೇಷದಿಂದ ಆತನ ಹುಟ್ಟು ಹಬ್ಬದಂದೇ ಚೂರಿಯಿಂದ ಬರ್ಬರವಾಗಿ ಇರಿದು ಕೊಲೆಗೈದಿದ್ದ.
ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಂದಿನ ಉರ್ವ ಠಾಣೆ ಇನ್‌ಸ್ಪೆಕ್ಟರ್ ರಾಮಚಂದ್ರ ಮಾಳೇದವರ ಪ್ರಕರಣ ದಾಖಲಿಸಿ ನ್ಯಾಯಾಲಯದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಕೊಲೆ ನಡೆದ ನಾಲ್ಕು ದಿನಗಳಲ್ಲಿ ಪ್ರಮುಖ ಆರೋಪಿ ಅಶು ಯಾನೆ ಆಶ್ರಿತ್ ಹಾಗೂ ಸಂಚು ನಡೆಸಿದ ಆರೋಪದಲ್ಲಿ ಇತರ ಐವರು ಆರೋಪಿಗಳನ್ನು ಉರ್ವ ಪೊಲೀಸರು ಬಂಧಿಸಿದ್ದರು. ಎಲ್ಲ ಆರೋಪಿಗಳೂ ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಇದೀಗ ಆಶ್ರೀತ್‌ಗೆ ಮಾತ್ರ ಶಿಕ್ಷೆಯಾಗಿದ್ದು, ಉಳಿದವರು ಖುಲಾಸೆಗೊಂಡಿದ್ದಾರೆ.
ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶಾರದಾ ಬಿ. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡು 25 ಮಂದಿ ಸಾಕ್ಷಿಗಳ ವಿಚಾರಣೆ ನಡೆಸಿ ಆಶ್ರಿತ್ ಮೇಲಿನ ಆರೋಪ ಸಾಬೀತುಗೊಂಡಿದೆ ಎಂದು ತೀರ್ಪು ಪ್ರಕಟಿಸಿದ್ದಾರೆ. ಪ್ರಾಸಿಕ್ಯೂಶನ್ ಪರವಾಗಿ ಸರಕಾರಿ ಅಭಿಯೋಜಕ ರಾಜು ಪೂಜಾರಿ ಬನ್ನಾಡಿ ವಾದಿಸಿದ್ದರು.