×
Ad

ಸಿನೆಮಾ ಮೌಲ್ಯ ನಿಜ ಜೀವನಕ್ಕೆ ಅನ್ವಯವಾಗಲಿ: ಮುನೀರ್ ಕಾಟಿಪಳ್ಳ

Update: 2018-12-27 20:27 IST

ಮಂಗಳೂರು, ಡಿ.27: ಸಿನೆಮಾ, ಧಾರವಾಹಿಗಳನ್ನು ವೀಕ್ಷಿಸುತ್ತಿರುವಾಗ ಕಣ್ಣೀರಿನ ಕೋಡಿ ಮಾನವೀಯ ಅಂತಃಕರಣಗಳ ಮಹಾಪೂರವನ್ನೇ ಹರಿಸು ತ್ತಾರೆ. ಈ ವಾಹಿನಿಗಳಿಂದ ವಾಸ್ತವ ಪ್ರಪಂಚಕ್ಕೆ ಬಂದಾಗ ಮಾನವೀಯ ಮೌಲ್ಯಗಳು ಕ್ರೌರ್ಯ, ಲೂಟಿ, ಜಾತೀಯತೆ, ಮತೀಯತೆಗಳು ವಿಭೃಂಭಿಸುತ್ತವೆ. ಸಿನೆಮಾ ಮೌಲ್ಯ ನಿಜ ಜೀವನಕ್ಕೆ ಅನ್ವಯವಾಗಲಿ ಎಂದು ಡಿವೈಎಫ್‌ಐ ರಾಜ್ಯ ಸಮಿತಿ ಅಧ್ಯಕ್ಷ ಮುನೀರ್ ಕಾಟಿಪಳ್ಳ ಅಭಿಪ್ರಾಯಪಟ್ಟರು.

ಯೆಯ್ಯಡಿ ಕೊಂಚಾಡಿ ಡಿವೈಎಫ್‌ಐ ಮತ್ತು ಸಿಐಟಿಯು ಸಂಘಟನೆಗಳ ಆಶ್ರಯದಲ್ಲಿ ಬುಧವಾರ ಜರುಗಿದ ಸ್ನೇಹಕೂಟ ಮತ್ತು ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಿಐಟಿಯು ಮುಖಂಡ ರವಿಚಂದ್ರ ಕೊಪ್ಪಲಕಾಡು ಮಾತನಾಡಿ, ಎಫ್.ಎಕ್ಸ್. ಪಿಂಟೋರವರ ಬಹುಮುಖ ವ್ಯಕ್ತಿತ್ವ ಮತ್ತು ಸಾಮಾಜಿಕ ಮೌಲ್ಯಗಳ ಬಗ್ಗೆ ವಿವರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಪ್ರಗತಿಪರ ಚಿಂತಕ, ಮಾನವ ಹಕ್ಕುಗಳ ಹೋರಾಟಗಾರ ಡಾ.ಕೃಷ್ಣಪ್ಪ ಕೊಂಚಾಡಿ ವಹಿಸಿದ್ದರು.

ಸಮಾಜ ಸೇವಕ ಎಫ್ ಎಕ್ಸ್ ಪಿಂಟೋ ಬಾರೆಬೈಲ್ ಅವರನ್ನು ಡಿವೈಎಫ್‌ಐ ರಾಜ್ಯ ಸಮಿತಿ ಅಧ್ಯಕ್ಷ ಮುನೀರ್ ಕಾಟಿಪಳ್ಳ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ಎಫ್ ಎಕ್ಸ್ ಪಿಂಟೋರವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ವೇದಿಕೆಯಲ್ಲಿ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಡಿವೈಎಫ್‌ಐ ಅಧ್ಯಕ್ಷ ಗಣೇಶ್ ಕೊಪ್ಪಲಕಾಡು ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮ ದಲ್ಲಿ ಡಿವೈಎಫ್‌ಐ ಮುಖಂಡ ನವೀನ್ ಬೊಲ್ಪುಗುಡ್ಡೆ ಸ್ವಾಗತಿಸಿದರು. ಡಿವೈಎಫ್‌ಐ ಸ್ಥಳೀಯ ಮುಖಂಡ ಕ್ರಿಸ್ಟೋಫರ್ ಡಿಸೋಜ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News