ಅಕ್ರಮ ದಾಸ್ತಾನಿರಿಸಿದ್ದ ಗೋಡೌನ್‌ಗೆ ದಾಳಿ: ಮೂವರು ಸೆರೆ; ಲಾರಿ, ಬಿಸಿಯೂಟ ಸಾಮಗ್ರಿ ವಶ
ಮಂಗಳೂರು, ಡಿ.27: ನಗರದ ದಂಬೇಲ್ ಬಳಿ ಬಿಸಿಯೂಟ ಮತ್ತು ಕ್ಷೀರಭಾಗ್ಯ ಯೋಜನೆಯ ಸಾಮಗ್ರಿಗಳ ಅಕ್ರಮ ದಾಸ್ತಾನು ಇರಿಸಿದ್ದ ಗೋಡೌನ್‌ಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಲಾರಿ ಹಾಗೂ ಬಿಸಿಯೂಟ ಸಾಮಗ್ರಿಗಳನ್ನು ವಶಪಡಿಸಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳಾದ ಕೊಪ್ಪಳ ನಿವಾಸಿ ಬಸವರಾಜು, ಅಶೋಕನಗರ ನಿವಾಸಿ ಚಂದ್ರಕುಮಾರ್ ಹಾಗೂ ಚಿಲಿಂಬಿಯ ರಕ್ಷಿತ್ ಬಂಧಿತರು ಎಂದು ತಿಳಿದುಬಂದಿದೆ.
ಬಂಧಿತರಿಂದ 25 ಕೆ.ಜಿ. ತೂಕದ ನಂದಿನಿ ಹಾಲಿನ ಹುಡಿಯ 7 ಬ್ಯಾಗ್‌ಗಳು, ಒಂದು ಕ್ವಿಂಟಾಲ್ ತೊಗರಿಬೇಳೆ, 2.5 ಕ್ವಿಂಟಾಲ್ ಅಕ್ಕಿ ಮೂಟೆ ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿದ ಸೊತ್ತಿನ ಒಟ್ಟು ಮೌಲ್ಯ 10,49,200 ರೂ. ಎಂದು ಅಂದಾಜಿಸಲಾಗಿದೆ.
ನಗರದ ದಂಬೆಲ್ ಗುರುಕೃಪಾ ಆಯಿಲ್ ಮಿಲ್‌ನಲ್ಲಿ ಸರಕಾರದಿಂದ ಶಾಲಾ ಮಕ್ಕಳಿಗೆ ಒದಗಿಸಲಾಗುವ ಮದ್ಯಾಹ್ನದ ಬಿಸಿಯೂಟ ಹಾಗೂ ಕ್ಷೀರಭಾಗ್ಯ ಯೋಜನೆಗೆ ಒದಗಿಸಿದ ಅಕ್ಕಿ, ತೊಗರಿಬೇಳೆ, ಹಾಲಿನ ಹುಡಿ ಸಾಮಗ್ರಿಗಳನ್ನು ಅಕ್ರಮವಾಗಿ ದಾಸ್ತಾನಿಟ್ಟು ಲಾರಿಯಲ್ಲಿ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು, ಜಿಲ್ಲಾ ಶಿಕ್ಷಣ ಅಧಿಕಾರಿಯವರೊಂದಿಗೆ ಡಿ. 26ರಂದು ದಾಳಿ ಮಾಡಿದ್ದರು. ಈ ವೇಳೆ ಇಲ್ಲಿನ ಗುರುಕೃಪಾ ಆಯಿಲ್ ಮಿಲ್‌ನಲ್ಲಿ ಅಕ್ರಮವಾಗಿ ಸರಕಾರದಿಂದ ಶಾಲಾ ಮಕ್ಕಳಿಗೆ ಒದಗಿಸಲಾಗುವ ಬಿಸಿಯೂಟ ಹಾಗೂ ಕ್ಷೀರಭಾಗ್ಯ ಯೋಜನೆಗಳಲ್ಲಿ ಒದಗಿಸುವ ಅಕ್ಕಿ, ತೊಗರಿಬೇಳೆ, ಹಾಲಿನ ಹುಡಿ ಪ್ಯಾಕೆಟ್‌ಗಳನ್ನು ದಾಸ್ತಾನು ಇರಿಸಿರುವುದು ಪತ್ತೆಯಾಗಿತ್ತು.
ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್ ಶಾಂತಾರಾಮ, ಎಸ್ಸೈಗಳಾದ ಶ್ಯಾಮಸುಂದರ್, ಕಬ್ಬಾಳ್ ರಾಜ್ ಹಾಗೂ ಸಿಬ್ಬಂದಿ ಮತ್ತು ಜಿಲ್ಲಾ ಶಿಕ್ಷಣ ಅಧಿಕಾರಿ ರಾಜಲಕ್ಷ್ಮಿ ಭಾಗವಹಿಸಿದ್ದರು.