×
Ad

ಜ.25ರಿಂದ ಬಾರಕೂರಿನಲ್ಲಿ ಅಳುಪೋತ್ಸವ: ಸಚಿವೆ ಜಯಮಾಲಾ

Update: 2018-12-27 21:39 IST

ಉಡುಪಿ, ಡಿ.27: ಬಾರಕೂರಿನಲ್ಲಿ ಅಳುಪೋತ್ಸವ ಕಾರ್ಯಕ್ರಮ ಜನವರಿ 25ರಿಂದ 27ರವರೆಗೆ ನಡೆಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ತಿಳಿಸಿದ್ದಾರೆ.

ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಅಳುಪೋತ್ಸವ ನಿಮಿತ್ತ 3 ದಿನಗಳ ಕಾಲ ಬಾರಕೂರಿನಲ್ಲಿ ಜಾನಪದ ಜಾತ್ರೆ, ಕೌಶಲ್ಯ ಮೇಳ, ಫಲಪುಷ್ಪ ಪ್ರದರ್ಶನ, ಸಿರಿ ಜಾತ್ರೆ, ಸಾವಯವ ಜಾತ್ರೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಸಚಿವರು ತಿಳಿಸಿದರು.

ಅಳುಪರಿಗೆ ಸಂಬಂಧಿಸಿದಂತೆ ವಿಚಾರಸಂಕಿರಣ, ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ, ಭಾಷಣ ಸ್ಪರ್ಧೆ ಏರ್ಪಡಿಸಲಾಗುವುದು. ಅಲ್ಲದೇ ಖ್ಯಾತ ಚಿತ್ರಕಲಾವಿ ದರ ನೇತೃತ್ವದಲ್ಲಿ ಬಾರಕೂರಿನ ಇತಿಹಾಸದ ಬಗ್ಗೆ ಚಿತ್ರ ಬಿಡಿಸಲಾಗುವುದು ಎಂದು ಸಚಿವೆ ಜಯಮಾಲಾ ತಿಳಿಸಿದರು.

ಅಳುಪೋತ್ಸವ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ಒಂದು ಕೋಟಿ ರೂ. ಅನುದಾನ ಬಿಡುಗಡೆಯಾಗಲಿದೆ.ಇದರೊಂದಿಗೆ ತೋಟಗಾರಿಕಾ ಇಲಾಖೆಯಿಂದ 25 ಲಕ್ಷ ರೂ. ಬಿಡುಗಡೆಯಾಗಲಿದೆ. ಈ ಸಂಬಂಧ ಈಗಾಗಲೇ ತಾನು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹಾಗೂ ತೋಟಗಾರಿಕಾ ಸಚಿವ ಮನಗೂಳಿ ಅವರೊಂದಿಗೆ ಮಾತನಾಡಿದ್ದು, ಅನುದಾನ ಬಿಡುಗಡೆಗೆ ಒಪ್ಪಿಕೊಂಡಿದ್ದಾರೆ ಎಂದು ಜಯಮಾಲಾ ತಿಳಿಸಿದರು.

ಅಳುಪೋತ್ಸವ ಅಂಗವಾಗಿ ಅಂಚೆ ಇಲಾಖೆಯಿಂದ ವಿಶೇಷ ಅಂಚೆ ಚೀಟಿ ಬಿಡುಗಡೆಗೆ ಪ್ರಯತ್ನಿಸಲಾಗುವುದು. ಉತ್ಸವದ ಯಶಸ್ಸಿಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಸ್ಥಳೀಯರನ್ನು ಒಳಗೊಂಡ ಸಮಿತಿಗಳನ್ನು ಸಹ ರಚಿಸಲಾಗಿದೆ ಎಂದು ಸಚಿವೆ ನುಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಸಂತೋಷ್ ಗುರೂಜಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News