×
Ad

ಹಿಂದೂ ಧರ್ಮ ದ್ವೇಷಿ ಭಗವಾನ್ ಮಾತಿಗೆ ಬೆಲೆ ನೀಡಬೇಕಿಲ್ಲ: ಪೇಜಾವರ ಶ್ರೀ

Update: 2018-12-27 21:43 IST

ಉಡುಪಿ, ಡಿ. 27: ಪ್ರೊ. ಭಗವಾನ್ ಅವರು ಹಿಂದೂ ಧರ್ಮದ ಮೇಲೆ ದ್ವೇಷ ಇಟ್ಟಿದ್ದಾರೆ. ಹೀಗಾಗಿ ಅವರ ಮಾತಿಗೆ ಯಾವುದೇ ಬೆಲೆಕೊಡಬೇಕಾಗಿಲ್ಲ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರು ಹೇಳಿದ್ದಾರೆ.

ಶ್ರೀರಾಮನ ಬಗ್ಗೆ ಪ್ರೊ.ಭಗವಾನ್ ಅವರು ಅವಮಾನಕಾರಿ ಬರೆದಿದ್ದಾರೆಂಬ ವಿವಾದ ಕುರಿತು ಇಂದು ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಪ್ರೊ. ಭಗವಾನ್‌ಗೆ ತಿರುಗೇಟು ನೀಡಿದ್ದಾರೆ.

 ಶ್ರೀರಾಮ ಶಂಭೂಕನನ್ನು ಕೊಂದಿದ್ದಾನೆ ಎಂಬುದು ಭಗವಾನ್ ಅವರ ಆರೋಪ. ಶಂಭೂಕ ಒಬ್ಬ ದುಷ್ಟ ಬುದ್ದಿಯ ವ್ಯಕ್ತಿಯಾಗಿದ್ದ. ಶಂಭೂಕ ದುರುದ್ದೇಶಕ್ಕೆ ಮಾಟದ ರೂಪದ ತಪಸ್ಸು ಮಾಡಿದ್ದಕ್ಕೆ ರಾಮ ಸಂಹಾರ ಮಾಡಿದ ಎಂದು ಪೇಜಾವರಶ್ರೀ ವಿವರಿಸಿದರು.

ಶಬರಿ ಬೇಡ ಸಮುದಾಯದ ಮಹಿಳೆ, ವಾಲ್ಮೀಕಿ ಬೇಡ ಸಮುದಾಯದವರು. ಶಬರಿ, ವಾಲ್ಮೀಕಿಗೆ ರಾಮ ಅನುಗ್ರಹ ಮಾಡಿದ್ದಾನೆ. ರಾಮ ಶೂದ್ರ ವಿರೋಧಿಯಾಗಿದ್ದರೆ ಶಂಭೂಕನಂತೆ ಇವರನ್ನೂ ಕೊಲ್ಲಬೇಕಿತ್ತು ಎಂದರು.

ಶ್ರೀರಾಮ ಕ್ಷತ್ರೀಯ ಕುಲಕ್ಕೆ ಸೇರಿದ ವ್ಯಕ್ತಿ. ಹೀಗಾಗಿ ಆತ ಮಾಂಸಾಹಾರ ಸೇವನೆ ಮಾಡಿದ್ದರೆ ಅದರಲ್ಲಿ ಆಶ್ಚರ್ಯ ಇಲ್ಲ. ಮೇರೇಯ ಅಂದರೆ ಅದು ಮದ್ಯ ಅಲ್ಲ, ಅದೊಂದು ಪಾನೀಯ. ಏಸು ಕ್ರಿಸ್ತ, ಪೈಗಂಬರ್ ಮಾಂಸ ತಿಂದು ದೇವರಾಗಿಲ್ಲವೇ ? ಕೇವಲ ರಾಮನ ಬಗ್ಗೆ ಮಾತ್ರ ಏಕೆ ಮಾತನಾಡುತ್ತೀರಿ ? ಎಂದವರು ಪ್ರೊ.ಭಗವಾನ್ ಅವರನ್ನು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News