ಉದ್ಯಾವರ: 125 ಆರ್ಯವೇದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಿಷ್ಯೋಪನಯನ

Update: 2018-12-27 16:14 GMT

ಉದ್ಯಾವರ, ಡಿ.27: ಇಂದು ಹೆಚ್ಚುತ್ತಿರುವ ಆಸ್ಪತ್ರೆಗಳ ಸಂಖ್ಯೆ ಸಮಾಜದ ಪತನ ಹಾದಿಯನ್ನು ತೋರಿಸುತ್ತಿದೆ. ಮನುಷ್ಯ ತನ್ನ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಕಾರ್ಕಳ ಶ್ರೀರಾಮಕೃಷ್ಣ ಆಶ್ರಮ (ಬೈಲೂರು ಮಠ)ದ ಶ್ರೀವಿನಾಯಕಾನಂದ ಸ್ವಾಮೀಜಿ ಹೇಳಿದ್ದಾರೆ.

ಉದ್ಯಾವರ ಕುತ್ಪಾಡಿಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ 125 ಮಂದಿ ಪ್ರಥಮ ವರ್ಷದ ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿಗಳಿಗೆ 21ನೇ ಶಿಷ್ಯೋಪನಯನ ಸಂಸ್ಕಾರ ಕಾರ್ಯಕ್ರಮ ದಲ್ಲಿ ಅವರು ಆಶಿೀರ್ವಚನ ನೀಡಿ ಮಾತನಾಡುತಿದ್ದರು.

ಆಧ್ಯಾತ್ಮಿಕ ಭಾವನೆ ಹಾಗೂ ಮಾನವೀಯ ಮೌಲ್ಯ ಗುಣಗಳನ್ನು ಯುವ ವೈದ್ಯರು ಮೈಗೂಡಿಸಿಕೊಂಡರೆ, ವೈದ್ಯರು ಹಾಗೂ ರೋಗಿಗಳ ನಡುವಿನ ಸಂಬಂಧವನ್ನು ಉತ್ತಮವಾಗಿರಿಸಿಕೊಳ್ಳಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.

ವೈದ್ಯರು ರೋಗಿಗಳೊಂದಿಗೆ ತಾಳ್ಮೆ ಮತ್ತು ಪ್ರೀತಿಯಿಂದ ವರ್ತಿಸಬೇಕು. ಒಳ್ಳೆಯ ಮಾತುಗಳನ್ನು ಆಡುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು. ಒಂದು ಕಾಯಿಲೆಯ ಚಿಕಿತ್ಸೆಗೆಂದು ಬಂದ ರೋಗಿ ಮತ್ತೆ ಅದೇ ಕಾಯಿಲೆಯ ಚಿಕಿತ್ಸೆಗೆ ಬಾರದಿರುವ ಹಾಗೆ ನೋಡಿಕೊಳ್ಳಬೇಕು ಎಂದು ವೈದ್ಯ ವಿದ್ಯಾರ್ಥಿ ಗಳಿಗೆ ಅವರು ಕಿವಿಮಾತು ಹೇಳಿದರು.

ವೈದ್ಯರು ಆಧುನಿಕ ತಂತ್ರಜ್ಞಾನದ ವಿಷಯಗಳನ್ನು ಅಧ್ಯಯನ ಮಾಡಿ ವೈದ್ಯಕೀಯ ಕ್ಷೇತ್ರಕ್ಕೆ ಬರುತ್ತಾರೆ.ಅವರಿಗೆ ಧಾರ್ಮಿಕ,ಸಾಮಾಜಿಕ, ಮಾನವೀಯ ಮೌಲ್ಯದ ಗುಣಗಳು ಕಮ್ಮಿ ಇರುತ್ತವೆ. ನಮ್ಮ ಪರಂಪರೆಯ ಬಗ್ಗೆ ಅರಿವಿಲ್ಲದೆ ಇಂದು ವೈದ್ಯ ಹಾಗೂ ರೋಗಿಗಳ ನಡುವಿನ ಅಂತರ ಹೆಚ್ಚಾಗಲು ಕಾರಣವಾಗಿದೆ. ಧಾರ್ಮಿಕ ಭಾವನೆಯನ್ನು ಶಿಕ್ಷಣದ ಅವಧಿಯಲ್ಲಿ ಮೈಗೂಡಿಸಿ ಕೊಳ್ಳುವುದರಿಂದ ಶರಣಾಗತಿಯ ಭಾವ ಬರುತ್ತದೆ ಎಂದರು.

ಶ್ರೀಧರ್ಮಸ್ಥಳ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಜಿ ಶ್ರೀನಿವಾಸ ಆಚಾರ್ಯ, ವೈದ್ಯಕೀಯ ಅಧಿಕ್ಷಕಿ ಡಾ.ಕೆ.ವಿ.ಮಮತ, ಸ್ನಾತಕೋತ್ತರ ವಿಭಾಗ ಮುಖ್ಯಸ್ಥ ಡಾ.ನಿರಂಜನ ರಾವ್, ಸಹಾಯಕ ಮುಖ್ಯಸ್ಥ ಡಾ.ನಾಗರಾಜ, ಸಹಾಯಕ ಕ್ಷೇಮಾ ಪಾಲನಾಧಿಕಾರಿ ಡಾ.ವೀರಕುಮಾರ್ ಉಪಸ್ಥಿತರಿದ್ದರು.
ಡಾ.ನಿರಂಜನ ರಾವ್ ಸ್ವಾಗತಿಸಿದರೆ ಉಪನ್ಯಾಸಕ ಸಂದೇಶ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News