ಪತ್ರಕರ್ತನಿಗೆ ಬೆದರಿಕೆಯೊಡ್ಡಿದ್ದ ಸಂಸದನಿಂದ ಕ್ಷಮೆಯಾಚನೆ

Update: 2018-12-27 16:46 GMT

ಗುವಾಹಟಿ,ಡಿ.27: ಬುಧವಾರ ಅಸ್ಸಾಮಿನ ಧುಬ್ರಿ ಜಿಲ್ಲೆಯ ಮಂಕಾಚರ್ ಎಂಬಲ್ಲಿ ಪತ್ರಕರ್ತನೋರ್ವನನ್ನು ನಿಂದಿಸಿ,ತಲೆ ಒಡೆಯುವುದಾಗಿ ಬೆದರಿಕೆಯೊಡ್ಡಿದ್ದ ಎಐಯುಡಿಎಫ್ ಮುಖ್ಯಸ್ಥ ಹಾಗೂ ಧುಬ್ರಿ ಲೋಕಸಭಾ ಸದಸ್ಯ ಮೌಲಾನಾ ಬದ್ರುದ್ದೀನ್ ಅಜ್ಮಲ್ ಅವರು ತನ್ನ ವರ್ತನೆಗಾಗಿ ಗುರುವಾರ ಕ್ಷಮೆ ಯಾಚಿಸಿದ್ದಾರೆ. ತಾನು ಮಾಧ್ಯಮ ಕ್ಷೇತ್ರದ ಜನರನ್ನು ಗೌರವಿಸುತ್ತೇನೆ ಎಂದೂ ಅವರು ಹೇಳಿಕೊಂಡಿದ್ದಾರೆ.

‘‘ಮಾಧ್ಯಮ ಕ್ಷೇತ್ರವು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿದೆ ಮತ್ತು ನಾನು ಯಾವಾಗಲೂ ಮಾಧ್ಯಮದವರನ್ನು ಗೌರವಿಸುತ್ತಲೇ ಬಂದಿದ್ದೇನೆ. ಪ್ರತಿಯೊಬ್ಬರಿಗೂ ಇದು ಗೊತ್ತು. ಘಟನೆಗಾಗಿ ನಾನು ಸಂಬಂಧಿತ ಎಲ್ಲರ ಕ್ಷಮೆ ಕೋರುತ್ತೇನೆ ’’ಎಂದು ಅಜ್ಮಲ್ ಟ್ವೀಟಿಸಿದ್ದಾರೆ.

ಸುದ್ದಿಗೋಷ್ಠಿಯೊಂದರಲ್ಲಿ ಅಸ್ಸಾಮಿ ಪತ್ರಕರ್ತನೋರ್ವನ ಪ್ರಶ್ನೆಯಿಂದ ಕೆರಳಿ ಕೆಂಡಾಮಂಡಲರಾಗಿದ್ದ ಅಜ್ಮಲ್ ಧ್ವನಿವರ್ಧಕವನ್ನು ಎಸೆದು ಆತನನ್ನು ವಾಚಾಮಗೋಚರವಾಗಿ ನಿಂದಿಸಿದ್ದಲ್ಲದೆ,ತನ್ನ ಹಿಂಬಾಲಕರ ಮೂಲಕ ತಲೆ ಒಡೆಸುವುದಾಗಿ ಬೆದರಿಕೆಯೊಡ್ಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News