×
Ad

ಜೇಟ್ಲಿ ಭೇಟಿಯಾದ ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-12-27 22:23 IST

ಹೊಸದಿಲ್ಲಿ,ಡಿ.27: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯನ್ನು ಗುರುವಾರ ಭೇಟಿಯಾದ ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಜಿಎಸ್‌ಟಿ ಪರಿಹಾರ ಅವಧಿಯನ್ನು 2025ರವರೆಗೆ ವಿಸ್ತರಿಸುವಂತೆ ಮನವಿ ಮಾಡಿದ್ದಾರೆ. ಜಿಎಸ್‌ಟಿ ಜಾರಿಯ ನಂತರ ಕರ್ನಾಟಕದ ಆದಾಯ ಕೊರತೆ ಶೇ.20ರಷ್ಟು ಹೆಚ್ಚಾಗಿದೆ ಎಂದು ಅವರು ಈ ವೇಳೆ ಜೇಟ್ಲಿಗೆ ತಿಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಸದ್ಯ ರಾಜ್ಯಗಳು ಜಿಎಸ್‌ಟಿ ಜಾರಿಯಾದ ಸಮಯದಿಂದ ಐದು ವರ್ಷಗಳ ಕಾಲ, ಅಂದರೆ 2022ರವರೆಗೆ ಪರಿಹಾರವನ್ನು ಪಡೆಯಲಿದ್ದಾರೆ. ಹೊಸದಿಲ್ಲಿಯ ಸಂಸತ್ ಭವನದಲ್ಲಿ ಜೇಟ್ಲಿಯನ್ನು ಭೇಟಿಯಾದ ಕುಮಾರಸ್ವಾಮಿ, 2022ರ ನಂತರವೂ ರಾಜ್ಯದ ಆದಾಯ ಕೊರತೆ ಮುಂದುವರಿಯಲಿದೆ. ಇದರಿಂದ ವಿವಿಧ ಅಭಿವೃದ್ಧಿ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಬಿಡುಗಡೆ ಮಾಡಲಾಗುವ ನಿಧಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.

2017-18ಕ್ಕೆ ಹೋಲಿಸಿದರೆ ಸದ್ಯದ ವಿತ್ತೀಯ ವರ್ಷದಲ್ಲಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹದಲ್ಲಿ ಸುಧಾರಣೆ ಕಂಡುಬಂದಿದೆ. ಆದರೆ ರಕ್ಷಿತ ಆದಾಯದ ಮಧ್ಯೆ ಇರುವ ಅಂತರ ಗಮನಾರ್ಹವಾಗಿದ್ದು 2022ರ ನಂತರವೂ ಮುಂದುವರಿಯುವ ಸಾಧ್ಯತೆಯಿದೆ ಎಂದು ಕುಮಾರಸ್ವಾಮಿ ವಿತ್ತ ಸಚಿವರಿಗೆ ಮನವರಿಕೆ ಮಾಡಿದ್ದಾರೆ ಎಂದು ಅಧಿಕೃತ ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News