ಎಪ್ರಿಲ್ ಒಂದರಿಂದ ವಾಹನಗಳಿಗೆ ಬಿಗುಭದ್ರತೆಯ ನಂಬರ್ ಪ್ಲೇಟ್

Update: 2018-12-27 16:59 GMT

ಹೊಸದಿಲ್ಲಿ,ಡಿ.27: ಎಪ್ರಿಲ್ ಒಂದರಿಂದ ಎಲ್ಲ ವಾಹನಗಳಿಗೆ ವಿರೂಪಗೊಳಿಸಲು ಅಸಾಧ್ಯವಾದ ಬಿಗುಭದ್ರತೆಯ ನಂಬರ್ ಪ್ಲೇಟ್‌ಗಳನ್ನು (ಎಚ್‌ಎಸ್‌ಆರ್‌ಪಿ) ಅಳವಡಿಸಲಾಗುವುದು ಎಂದು ಗುರುವಾರ ಲೋಕಸಭೆಯಲ್ಲಿ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಮೂರನೇ ನೋಂದಣಿ ಚಿಹ್ನೆಯನ್ನು ಹೊಂದಿರುವ ಎಚ್‌ಎಸ್‌ಆರ್‌ಪಿಗಳನ್ನು ವಾಹನ ನಿರ್ಮಾಣ ಸಂಸ್ಥೆಗಳೇ 2019ರ ಎಪ್ರಿಲ್ ಒಂದು ಮತ್ತು ನಂತರ ನಿರ್ಮಿಸಲಾಗುವ ವಾಹನಗಳ ಜೊತೆಗೆ ವಾಹನ ಮಾರಾಟಗಾರರಿಗೆ ಪೂರೈಸಲಿದ್ದಾರೆ ಎಂದು ಸಚಿವರು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. 1989ರ ಕೇಂದ್ರ ಮೋಟಾರು ವಾಹನ ಕಾಯ್ದೆಯ ಸಂಬಂಧಿತ ನಿಯಮದಲ್ಲಿ ಮತ್ತು 2001ರ ಎಚ್‌ಎಸ್‌ಆರ್‌ಪಿ ಆದೇಶದಲ್ಲಿ ತಿದ್ದುಪಡಿ ತರುವ ಪ್ರಸ್ತಾವನೆಗೆ ಆಕ್ಷೇಪ/ಸಲಹೆಗಳನ್ನು ನೀಡಲು ಸಾರ್ವಜನಿಕ ಜಾಲತಾಣದಲ್ಲಿ ಹಾಕಲಾಗಿತ್ತು ಮತ್ತು 2018, ಜೂನ್ 5ರಂದು ನಡೆದ ಸಭೆಯಲ್ಲಿ ಚರ್ಚಿಸಲಾಗಿತ್ತು ಎಂದು ಗಡ್ಕರಿ ತಿಳಿಸಿದ್ದಾರೆ.

ಎಚ್‌ಎಸ್‌ಆರ್‌ಪಿಗಳನ್ನು ನಕಲು ಮಾಡಲು ಸಾಧ್ಯವಿಲ್ಲ. ಈ ಪ್ಲೇಟ್‌ಗಳನ್ನು ತೆಗೆಯಲು ಅಸಾಧ್ಯವಾದ ಮತ್ತು ಮರುಬಳಕೆಯಾಗದ ಸ್ನಾಪ್ ಲಾಕ್ ಫಿಟ್ಟಿಂಗ್ ಎಂಬ ತಂತ್ರಜ್ಞಾನದಿಂದ ಅಳವಡಿಸಲಾಗಿರುತ್ತದೆ ಎಂದು ಗಡ್ಕರಿ ತಿಳಿಸಿದ್ದಾರೆ. ಎಚ್‌ಎಸ್‌ಆರ್‌ಪಿಗಳು ಕ್ರೋಮಿಯಂ ಆಧಾರಿತ ಹೋಲೊಗ್ರಾಮ್‌ಗಳಾಗಿದ್ದು ವಾಹನಗಳ ಹಿಂದೆ ಮತ್ತು ಮುಂದಿನ ನಂಬರ್ ಪ್ಲೇಟ್‌ಗಳ ಮೇಲೆ ಅಂಟಿಸಲಾಗುತ್ತದೆ. ಇದರಲ್ಲಿ ಲೇಸರ್ ಆಧಾರಿತ ಶಾಶ್ವತ ಗುರುತಿನ ಸಂಖ್ಯೆಯಿರುತ್ತದೆ. ಮೂರನೇ ಗುರುತು ಕೂಡಾ ಕ್ರೋಮಿಯಂ ಆಧಾರಿತ ಹೋಲೊಗ್ರಾಮ್ ಆಗಿದ್ದು ವಾಹನದ ವಿಂಡ್‌ಶೀಲ್ಡ್‌ನ ಒಳಭಾಗಕ್ಕೆ ಅಂಟಿಸಲಾಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News