ನ್ಯಾಯಾಧೀಶರಿಗೆ ಕಪಾಳಮೋಕ್ಷ: ವಕೀಲನಿಗೆ ಹೈಕೋರ್ಟ್ ನೋಟಿಸ್

Update: 2018-12-27 17:02 GMT

ಮುಂಬೈ,ಡಿ.27: ನ್ಯಾಯಾಲಯದ ಆವರಣದಲ್ಲೇ ನ್ಯಾಯಾಧೀಶರ ಕೆನ್ನೆಗೆ ಬಾರಿಸಿದ ಸಹಾಯಕ ಸಾರ್ವಜನಿಕ ನ್ಯಾಯವಾದಿಯ ವಿರುದ್ಧ ಬಾಂಬೆ ಉಚ್ಚ ನ್ಯಾಯಾಲಯ ಸ್ವಯಂ ಪ್ರೇರಿತ ನೋಟಿಸ್ ಜಾರಿ ಮಾಡಿದೆ.

ಇಂಥ ಘಟನೆಗಳು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಅಪಾಯವನ್ನೊಡ್ಡುತ್ತವೆ ಎಂದು ಉಚ್ಚ ನ್ಯಾಯಾಲಯ ನಾಗ್ಪುರ ಪೀಠದ ರಜಾದಿನಗಳ ನ್ಯಾಯಾಧೀಶ ಆರ್.ಕೆ ದೇಶಪಾಂಡೆ ತಿಳಿಸಿದ್ದಾರೆ. ಸಹಾಯಕ ಸಾರ್ವಜನಿಕ ವಕೀಲ ದಿನೇಶ್ ಪರಾಟೆ ಸೆಶನ್ಸ್ ನ್ಯಾಯಾಲಯದ ಹಿರಿಯ ನಾಗರಿಕ ನ್ಯಾಯಾಧೀಶ ಕೆ.ಆರ್ ದೇಶಪಾಂಡೆಯ ಕೆನ್ನೆಗೆ ಬಾರಿಸಿದ್ದರು. ಬುಧವಾರದಂದು ನಾಗ್ಪುರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಏಳನೇ ಮಹಡಿಯ ಲಿಫ್ಟ್‌ನ ಹೊರಗೆ ಮಧ್ಯಾಹ್ನದ ವೇಳೆ ಈ ಘಟನೆ ನಡೆದಿತ್ತು. ಪೊಲೀಸರ ಪ್ರಕಾರ, ಆರೋಪಿ ವಕೀಲ, ಪ್ರಕರಣವೊಂದರಲ್ಲಿ ನ್ಯಾಯಾಧೀಶರು ನೀಡಿದ್ದ ಆದೇಶದ ಬಗ್ಗೆ ಅಸಮಾಧಾನಗೊಂಡಿದ್ದರು.

ನ್ಯಾಯಾಧೀಶರಿಗೆ ಹಲ್ಲೆ ನಡೆಸಿದ ಕೂಡಲೇ ಸ್ಥಳದಿಂದ ಓಡಲು ಯತ್ನಿಸಿದ ಪರಾಟೆಯನ್ನು ಸ್ಥಳದಲ್ಲಿದ್ದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶ ದೇಶಪಾಂಡೆ, ಈ ಪ್ರಕರಣದಲ್ಲಿ ನ್ಯಾಯಾಧೀಶರ ವೈಯಕ್ತಿಕ ಭದ್ರತೆಗೆ ಅಪಾಯ ಎದುರಾಗಿದೆ ಎಂದು ತಿಳಿಸಿದ್ದಾರೆ. ಈ ಘಟನೆ ನ್ಯಾಯಾಂಗದ ಸ್ವಾತಂತ್ರಕ್ಕೆ ಅಪಾಯ ತಂದೊಡ್ಡಿದೆ. ಕಾನೂನನ್ನು ಇಲ್ಲಿ ನಿರ್ಲಕ್ಷಿಸಲಾಗಿದೆ. ಇಂಥ ಆಕ್ರೋಶದ ವರ್ತನೆಗಳನ್ನು ಸಹಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ನಿಮ್ಮ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಕ್ರಮ ಯಾಕೆ ತೆಗೆದುಕೊಳ್ಳಬಾರದು ಎಂಬುದಕ್ಕೆ ಆರು ವಾರಗಳ ಒಳಗೆ ಉತ್ತರಿಸುವಂತೆ ಪರಾಟೆಗೆ ನ್ಯಾಯಾಲಯ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News