ಐಸಿಸ್ ನಂಟು: ಬಂಧಿತರನ್ನು 12 ದಿನಗಳ ಕಾಲ ತನಿಖಾ ತಂಡಕ್ಕೆ ಒಪ್ಪಿಸಿದ ನ್ಯಾಯಾಲಯ

Update: 2018-12-27 17:04 GMT

ಹೊಸದಿಲ್ಲಿ,ಡಿ.27: ಐಸಿಸ್‌ನಿಂದ ಸ್ಫೂರ್ತಿ ಪಡೆದ ಉಗ್ರ ಸಂಘಟನೆ ಹರ್ಕತುಲ್ ಹರ್ಬೆ ಇಸ್ಲಾಂಗೆ ಸೇರಿದವರು ಎನ್ನಲಾದ ಬಂಧಿತ ಹತ್ತು ಮಂದಿಯನ್ನು ಗುರುವಾರ ನ್ಯಾಯಾಲಯ ಹನ್ನೆರಡು ದಿನಗಳ ಕಾಲ ರಾಷ್ಟ್ರೀಯ ತನಿಖಾ ತಂಡಕ್ಕೆ ಒಪ್ಪಿಸಿದೆ.

ದಿಲ್ಲಿ ಮತ್ತು ಉತ್ತರ ಪ್ರದೇಶದ ಹದಿನೇಳು ಕಡೆಗಳಲ್ಲಿ ದಾಳಿ ನಡೆಸಿದ್ದ ಎನ್‌ಐಎ ಹದಿನಾರು ಮಂದಿಯನ್ನು ವಶಕ್ಕೆ ಪಡೆದುಕೊಂಡಿತ್ತು. ಗುರುವಾರದಂದು ಹತ್ತು ಆರೋಪಿಗಳನ್ನು ದಿಲ್ಲಿಯ ಪಟಿಯಾಲಾ ಹೌಸ್ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಪ್ರಕರಣದ ತನಿಖೆ ನಡೆಸಲು ಅಗತ್ಯವಿರುವ ಕಾರಣ ಬಂಧಿತರನ್ನು ಹದಿನೈದು ದಿನಗಳ ಕಾಲ ಎನ್‌ಐಎ ವಶಕ್ಕೆ ಒಪ್ಪಿಸುವಂತೆ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಆರೋಪಿಗಳ ಪರ ವಕೀಲ ಎಮ್.ಎಸ್ ಖಾನ್, ದಾಳಿಯ ವೇಳೆ ಯಾವ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಯಾವ ಪುರಾವೆಗಳು ದೊರೆತಿವೆ ಎಂಬುದನ್ನು ತಿಳಿಸಲು ತನಿಖಾ ಸಂಸ್ಥೆ ವಿಫಲವಾಗಿದೆ ಎಂದು ತಿಳಿಸಿದ್ದಾರೆ.

ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಅಜಯ್ ಪಾಂಡೆ ಆರೋಪಿಗಳನ್ನು ಹನ್ನೆರಡು ದಿನಗಳ ಕಾಲ ಎನ್‌ಐಎ ವಶಕ್ಕೆ ಒಪ್ಪಿಸಿ ಆದೇಶ ನೀಡಿದ್ದಾರೆ. ವಿಶೇಷ ಮನವಿಯ ಹಿನ್ನೆಲೆಯಲ್ಲಿ ಐದು ಮಂದಿ ಬಂಧಿತರ ಕುಟುಂಬಸ್ಥರು ನ್ಯಾಯಾಲಯ ಪ್ರವೇಶಿಸಿ ತಮ್ಮವರನ್ನು ಭೇಟಿ ಮಾಡುವ ಅವಕಾಶವನ್ನು ನ್ಯಾಯಾಲಯ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News