×
Ad

ಸಿರಿಯದಿಂದ ಅಮೆರಿಕ ಸೇನಾ ವಾಪಸಾತಿಯನ್ನು ಸಮರ್ಥಿಸಿದ ಟ್ರಂಪ್: ಇರಾಕ್‌ಗೆ ಕ್ಷಿಪ್ರ ಭೇಟಿ

Update: 2018-12-27 23:44 IST

ವಾಶಿಂಗ್ಟನ್, ಡಿ. 27: ಸಿರಿಯದಿಂದ ಅಮೆರಿಕ ಸೇನೆಯ ವಾಪಸಾತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ್ಥಿಸಿದ್ದಾರೆ ಹಾಗೂ ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೇನೆಯನ್ನು ನಿಯೋಜಿಸಿರುವ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಇರಾಕ್‌ಗೆ ಕ್ಷಿಪ್ರ ಭೇಟಿ ನೀಡಿ, ಅಲ್ಲಿನ ಸಂಘರ್ಷ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಅಮೆರಿಕ ಸೈನಿಕರನ್ನು ಭೇಟಿಯಾದ ಬಳಿಕ ಅವರು ಹೇಳಿಕೆಗಳನ್ನು ನೀಡಿದ್ದಾರೆ.

‘‘ನಾನು ಸಿರಿಯದಲ್ಲಿ ಸೇನಾ ವಾಪಸಾತಿಯ ಸೂಚನೆ ನೀಡಿದೆ. ಆದರೆ, ನಾನು ಸೇನೆಯನ್ನು ಮಾತ್ರ ವಾಪಸ್ ಪಡೆದುಕೊಳ್ಳುತ್ತಿದ್ದೇನೆ ಎಂಬ ರೀತಿಯಲ್ಲಿ ಅದನ್ನು ವರದಿ ಮಾಡಲಾಯಿತು. ನಾನು ಕೇವಲ ವಾಪಸ್ ಪಡೆದಿಲ್ಲ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು.

ಸಿರಿಯದಿಂದ 2,000 ಅಮೆರಿಕ ಸೈನಿಕರನ್ನು ವಾಪಸ್ ಕರೆಸಿಕೊಳ್ಳುವುದಾಗಿ ಕಳೆದ ವಾರ ಹೊರಡಿಸಿರುವ ಘೋಷಣೆಯ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು.

‘‘ನಾನು ಇದರ ಬಗ್ಗೆ ಒಂದೂವರೆ ವರ್ಷದಿಂದ ಮಾತನಾಡುತ್ತಿದ್ದೇನೆ. ನಾನು ಸೇನಾಧಿಕಾರಿಗಳಿಗೆ ಹೇಳುತ್ತಿದ್ದೇನೆ, ‘ನಾವು ಮುಂದುವರಿಯುವ, ಹೆಚ್ಚು ಸಮಯ ತೆಗೆದುಕೊಳ್ಳುವ’ ಎಂದು. ಅವರಿಗೆ ನಾನು ನಿರಂತರವಾಗಿ ಹೆಚ್ಚಿನ ಸಮಯವನ್ನು ನೀಡುತ್ತಾ ಬಂದಿದ್ದೇನೆ. ಕೊನೆಯದಾಗಿ ನಾನು ಹೇಳಿದೆ, ‘ಸರಿ, ಈಗ ಈ ಯುದ್ಧವನ್ನು ಇತರರು ಮುಂದುವರಿಸಲು ಸಕಾಲ’ ಎಂದು. ನಾವು ಅಲ್ಲಿರಲು ಬಯಸುವುದಿಲ್ಲ’’ ಎಂದು ಟ್ರಂಪ್ ನುಡಿದರು.

ಸಿರಿಯದಿಂದ ಸೈನಿಕರನ್ನು ವಾಪಸ್ ಕರೆಸಿಕೊಳ್ಳುವ ಟ್ರಂಪ್ ನಿರ್ಧಾರವನ್ನು ವಿರೋಧಿಸಿ ರಕ್ಷಣಾ ಸಚಿವ ಜೇಮ್ಸ್ ಮ್ಯಾಟಿಸ್ ಮತ್ತು ‘ಐಸಿಸ್ ವಿರುದ್ಧ ಹೋರಾಡುವ ಅಂತಾರಾಷ್ಟ್ರೀಯ ಮಿತ್ರಕೂಟ’ಕ್ಕೆ ಅಮೆರಿಕದ ವಿಶೇಷ ರಾಯಭಾರಿ ಬ್ರೆಟ್ ಮೆಕ್‌ಗರ್ಕ್ ರಾಜೀನಾಮೆ ನೀಡಿರುವುದನ್ನು ಸ್ಮರಿಸಬಹುದಾಗಿದೆ.

ಇರಾಕ್‌ನಿಂದ ಸೇನಾ ವಾಪಸಾತಿಯಿಲ್ಲ

ಇರಾಕ್‌ನಿಂದ ಅಮೆರಿಕ ಸೈನಿಕರನ್ನು ವಾಪಸ್ ಕರೆಸಿಕೊಳ್ಳುವ ಯೋಜನೆಯಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ಸದ್ಯಕ್ಕೆ ಇರಾಕ್‌ನಿಂದ ಸೈನಿಕರನ್ನು ವಾಪಸ್ ಕರೆಸಿಕೊಳ್ಳುವ ಯೋಚನೆಯಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

‘‘ವಾಸ್ತವವಾಗಿ, ಸಿರಿಯದಲ್ಲಿ ನಾವೇನಾದರೂ ಮಾಡಲು ಬಯಸಿದರೆ ಇರಾಕನ್ನು ನಾವು ನೆಲೆಯಾಗಿ ಬಳಸಬಹುದು’’ ಎಂದರು.

ಮಿಂಚಿನ ಭೇಟಿ

 ಇರಾಕ್‌ಗೆ ಅನಿರೀಕ್ಷಿತ ಭೇಟಿ ನೀಡಿದ ಡೊನಾಲ್ಡ್ ಟ್ರಂಪ್, ಪಶ್ಚಿಮ ಇರಾಕ್‌ನಲ್ಲಿನ ಅಲ್-ಅಸಾದ್ ವಾಯುನೆಲೆಯಲ್ಲಿ ಸ್ಥಳೀಯ ಸಮಯ ಸಂಜೆ 7:16ಕ್ಕೆ ಇಳಿದರು. ಅವರು ಪತ್ನಿ ಮೆಲಾನಿಯಾ ಜೊತೆಗೆ ‘ಏರ್‌ಫೋರ್ಸ್ ವನ್’ ವಿಮಾನದಲ್ಲಿ ಪ್ರಯಾಣಿಸಿದರು.

ಅವರು ಸುಮಾರು 100 ವಿಶೇಷ ಪಡೆ ಸಿಬ್ಬಂದಿಯ ಗುಂಪಿನೊಂದಿಗೆ ಮಾತನಾಡಿದರು. ಬಳಿಕ ಪ್ರತ್ಯೇಕವಾಗಿ ಸೇನಾಧಿಕಾರಿಗಳೊಂದಿಗೆ ಚರ್ಚಿಸಿದರು. ಕೆಲವು ಗಂಟೆಗಳ ಬಳಿಕ ಅವರು ವಾಪಸಾದರು.

ಅವರು ಇರಾಕ್ ಪ್ರಧಾನಿ ಆದಿಲ್ ಅಬ್ದುಲ್ ಮಹ್ದಿಯನ್ನು ಭೇಟಿಯಾಗುವ ಕಾರ್ಯಕ್ರಮವಿತ್ತು. ಆದರೆ, ಬಳಿಕ ಭೇಟಿಯನ್ನು ರದ್ದುಪಡಿಸಿ ಅವರೊಂದಿಗೆ ಫೋನ್‌ನಲ್ಲಿ ಮಾತನಾಡಿದರು.

ಫೋನ್ ಸಂಭಾಷಣೆಯಲ್ಲಿ ಟ್ರಂಪ್ ಇರಾಕ್ ಪ್ರಧಾನಿಯನ್ನು ವಾಶಿಂಗ್ಟನ್‌ಗೆ ಆಹ್ವಾನಿಸಿದರು. ಆಹ್ವಾನವನ್ನು ಅಬ್ದುಲ್ ಮಹದಿ ಸ್ವೀಕರಿಸಿದರು ಎಂದು ಶ್ವೇತಭವನದ ವಕ್ತಾರೆ ಸಾರಾ ಸ್ಯಾಂಡರ್ಸ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News