ಇಂಡೋನೇಶ್ಯ: ಜ್ವಾಲಾಮುಖಿ ಅಪಾಯ ಮಟ್ಟ ಏರಿಕೆ

Update: 2018-12-27 18:21 GMT

 ಜಕಾರ್ತ, ಡಿ. 27: ಕಳೆದ ವಾರ ಬೃಹತ್ ಹಂತಕ ಸುನಾಮಿ ಅಲೆಗಳನ್ನು ಸೃಷ್ಟಿಸಿದ್ದ ಜ್ವಾಲಾಮುಖಿಗಾಗಿ ಹೊರಡಿಸಿದ್ದ ಅಪಾಯದ ಮಟ್ಟವನ್ನು ಇಂಡೋನೇಶ್ಯ ಗುರುವಾರ ಹೆಚ್ಚಿಸಿದೆ.

ಜ್ವಾಲಾಮುಖಿ ದ್ವೀಪ ‘ಅನಕ್ ಕ್ರಕಾಟೊ’ ಸುತ್ತ ವಿಧಿಸಲಾಗಿದ್ದ 2 ಕಿ.ಮೀ. ನಿಷೇಧಿತ ವಲಯವನ್ನು ಅಧಿಕಾರಿಗಳು ಈಗ 5 ಕಿಲೋಮೀಟರ್‌ಗೆ ವಿಸ್ತರಿಸಿದ್ದಾರೆ. ಕರಾವಳಿಯಿಂದ ದೂರ ಉಳಿಯುವಂತೆ ಆಘಾತದಿಂದ ತತ್ತರಿಸಿರುವ ನಿವಾಸಿಗಳಿಗೆ ಎಚ್ಚರಿಸಿದ್ದಾರೆ.

ಶನಿವಾರ ರಾತ್ರಿ ಜಾವಾ ಮತ್ತು ಸುಮಾತ್ರ ದ್ವೀಪಗಳ ನಡುವಿನ ಸುಂದಾ ಜಲಸಂಧಿಯ ಅಂಚಿನ ಪ್ರದೇಶಗಳಿಗೆ ಅಪ್ಪಳಿಸಿದ ಸುನಾಮಿಯಲ್ಲಿ 420ಕ್ಕೂ ಅಧಿಕ ಮಂದಿ ಮೃತಪಟ್ಟಿರುವುದನ್ನು ಸ್ಮರಿಸಬಹುದಾಗಿದೆ.

 ಜ್ವಾಲಾಮುಖಿಯಿಂದ ಹೊಮ್ಮಿದ ಬೂದಿಯ ದಟ್ಟ ಹೊಗೆ ಆಕಾಶವನ್ನು ತುಂಬಿದೆ. ಹಾಗಾಗಿ, ಅದರ ಸಮೀಪದ ಸಮುದ್ರ ಪ್ರಕ್ಷುಬ್ಧಗೊಂಡು ದೋಣಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸಬಹುದು ಎಂದು ಹೇಳಲಾಗಿದೆ.

ಜ್ವಾಲಾಮುಖಿ ‘ಅತ್ಯಂತ ಅಪಾಯಕಾರಿ’ ಎಂಬ ಎಚ್ಚರಿಕೆಯನ್ನು ಅಧಿಕಾರಿಗಳು ಹೊರಡಿಸಿದ್ದಾರೆ.

ಈ ವಲಯದಿಂದ ಸುಮಾರು 22,000 ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಅವರು ಈಗ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News