ಕಾಂಗ್ರೆಸ್‌ಮುಕ್ತ ಮಾಡಲು ಹೊರಟವರಿಗೆ ಪಂಚರಾಜ್ಯದ ಚುನಾವಣಾ ಫಲಿತಾಂಶವೇ ಉತ್ತರ: ಪಿ.ಸಿ.ವಿಷ್ಣುನಾಥ್

Update: 2018-12-28 13:27 GMT

ಮಂಗಳೂರು, ಡಿ.28: ಕಾಂಗ್ರೆಸ್‌ಮುಕ್ತ ಭಾರತ ಮಾಡಲು ಹೊರಟವರಿಗೆ ಇತ್ತೀಚಿಗಿನ ಪಂಚ ರಾಜ್ಯದ ಚುನಾವಣೆ ಉತ್ತರ ನೀಡಿದೆ. ದೇಶದಲ್ಲಿ ಕಾಂಗ್ರೆಸ್ ಸಶಕ್ತವಾಗಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಪಿ.ಸಿ.ವಿಷ್ಣುನಾಥ್ ತಿಳಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಜಿಲ್ಲಾ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ದೇಶದಲ್ಲಿ ಕಾಂಗ್ರೆಸ್ ಸ್ಥಾಪನೆಯಾಗಿ 132 ವರ್ಷಗಳು ಸಂದಿವೆ.ಇಷ್ಟು ವರ್ಷಗಳ ಚರಿತ್ರೆಯಲ್ಲಿ ದೇಶಕ್ಕೆ ಕಾಂಗ್ರೆಸ್ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಆದರು ಕೆಲವರು ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಿದ್ದಾರೆ. ದೇಶದ ಸ್ವಾತಂತ್ರ ಹೋರಾಟದ ಅಗ್ರಗಣ್ಯ ನಾಯಕರಾದ ಮಹಾತ್ಮ ಗಾಂಧಿ, ಪಂಡಿತ್ ಜವಹರಲಾಲ್ ನೆಹರು, ಸರ್ಧಾರ್ ವಲ್ಲಭ ಭಾಯಿ ಪಟೇಲ್, ವೌಲಾನಾ ಅಬ್ದುಲ್ ಕಲಾಂ ಆಝಾದ್ ಮೊದಲಾದ ಮಹಾನ್ ನಾಯಕರನ್ನು ಕೊಡುಗೆ ನೀಡಿದ ಪಕ್ಷವೇ ಕಾಂಗ್ರೆಸ್. ದೇಶದ ಸ್ವಾತಂತ್ರ ಹೋರಾಟದ ಚರಿತ್ರೆ ಎಂದರೆ ಅದು ಕಾಂಗ್ರೆಸ್ ಪಕ್ಷದ ಚರಿತ್ರೆಯೆ ಆಗಿದೆ ಎಂದರು.

ಈ ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ದೇಶದ ವಿವಿಧ ರಾಜ್ಯಗಳಲ್ಲಿ ಆಗಿರುವ ಹಿನ್ನಡೆಯನ್ನು ಕಂಡು ಅಮಿತ್ ಶಾ ರಂತಹ ವ್ಯಕ್ತಿಗಳು ಕಾಂಗ್ರೆಸ್‌ಮುಕ್ತ ಭಾರತ ಮಾಡುವ ಹೇಳಿಕೆ ನೀಡುತ್ತಿದ್ದಾರೆ.ಆದರೆ ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ದೇಶದ ಜನತೆ ಈ ರೀತಿಯ ಹೇಳಿಕೆಗಳಿಗೆ ಸೂಕ್ತ ಉತ್ತರ ನೀಡಿದ್ದಾರೆ ಎಂದರು.

ದೇಶ ಉಳಿಸಲು ಕೇಂದ್ರ ಸರಕಾರವನ್ನು ಬದಲಾಯಿಸಿ

ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ‘ದೇಶವನ್ನು ಉಳಿಸಬೇಕಾದರೆ ಕೇಂದ್ರ ಸರಕಾರವನ್ನು ಬದಲಾಯಿಸಿ’ ಎನ್ನುವ ಘೋಷಣೆಯೊಂದಿಗೆ ಮುಂದಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕೇಂದ್ರ ಸರಕಾರದ ವೈಫಲ್ಯವನ್ನು ಜನರ ಮುಂದಿಡಬೇಕಾಗಿದೆ ಎಂದರು.

ಜಿಲ್ಲೆಯಲ್ಲಿ ಪಕ್ಷಕ್ಕೆ ಕಳೆದ ಚುನಾವಣೆಯಲ್ಲಿ ಆಗಿರುವ ಹಿನ್ನಡೆ ತಾತ್ಕಾಲಿಕ. ಸದ್ಯ ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಪಕ್ಷದ ಬಲವರ್ಧನೆಯಾಗುತ್ತಿದೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಎಲ್ಲರು ಒಗ್ಗಟ್ಟಿನಿಂದ ಶ್ರಮಿಸಬೇಕಾಗಿದೆ. ಪಕ್ಷವನ್ನು ಬಲಪಡಿಸಲು ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸುವ ಕೆಲಸವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಬೇಕಾಗಿದೆ ಎಂದರು.

*ಹಾಸನ-ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸ್ಥಗಿತಗೊಂಡಿದೆ. ದೀರ್ಘಾವಧಿಯಿಂದ ನನೆಗುದಿಗೆ ಬಿದ್ದಿರುವ ಈ ಯೋಜನೆ ವಿರುದ್ಧ ಪಾದಯಾತ್ರೆಯ ಮೂಲಕ ಕಾಂಗ್ರೆಸ್ ಹೋರಾಟ ಸಂಘಟಿಸಲಿದೆ ಎಂದು ಅವರು ಎಚ್ಚರಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಕಾಂಗ್ರೆಸ್ 135ನೆ ಸಂಸ್ಥಾಪನಾ ದಿನವನ್ನು ದೇಶಾದ್ಯಂತ ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳ ಸಮಾಲೋಚನಾ ಸಭೆ ನಡೆಸಲಾಗುತ್ತಿದೆ. ಪಕ್ಷದ ಸಂಘಟನಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ ಎಂದರು.

ಸಮಾರಂಭದಲ್ಲಿ ಮಾಜಿ ಸಚಿವರಾದ ಅಭಯಚಂದ್ರ ಜೈನ್, ರಾಜ್ಯ ಸರಕಾರದ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ, ಮಾಜಿ ಸಂಸದ ಬಿ.ಇಬ್ರಾಹೀಂ, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಶಕುಂತಳಾ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಪಿ.ವಿ.ಮೋಹನ್, ಜಿ.ಎ.ಬಾವ, ಮಮತಾ ಗಟ್ಟಿ, ಎಂ.ಎಸ್.ಮುಹಮ್ಮದ್, ಶಶಿಧರ ಹೆಗ್ಡೆ, ಸದಾಶಿವ ಉಳ್ಳಾಲ, ಸಂತೋಷ್ ಕುಮಾರ್ ಶೆಟ್ಟಿ, ಶಾಲೆಟ್ ಪಿಂಟೊ, ಕವಿತಾ ಸನಿಲ್, ಮುಹಮ್ಮದ್ ಸಲೀಂ, ಸುರೇಶ್ ಬಲ್ಲಾಳ್, ಲೋಕೇಶ್ ಹೆಗ್ಡೆ, ಶಾಹುಲ್ ಹಮೀದ್, ಧನಂಜಯ ಅಡ್ಪಂಗಾಯ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News