ಪ್ರಧಾನಮಂತ್ರಿ ಉಜ್ವಲ ಯೋಜನೆ ಪಿಎಂಯುವೈ-2 ಅನುಷ್ಠಾನ: ಗ್ಯಾಸ್ ಸಂಪರ್ಕ ಇಲ್ಲದವರಿಗೆ ಮತ್ತೊಂದು ಅವಕಾಶ
ಉಡುಪಿ, ಡಿ.28: ಕೇಂದ್ರ ಸರಕಾರ 2016ರಲ್ಲಿ ಪ್ರಾರಂಭಿಸಿದ ‘ಪ್ರಧಾನ ಮಂತ್ರಿ ಉಜ್ವಲ ಯೋಜನೆ’ (ಪಿಎಂಯುವೈ)ಯಲ್ಲಿ ಅಡುಗೆ ಅನಿಲ (ಎಲ್‌ಪಿಜಿ) ಸಂಪರ್ಕ ಸಿಗದೇ ಇರುವ ಬಿಪಿಎಲ್ ಕುಟುಂಬಗಳನ್ನು ಗುರುತಿಸಿ ಸಂಪರ್ಕ ನೀಡುವ ಪಿಎಂಯುವೈ-2ನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿ ಜುನೈದ್ ತಿಳಿಸಿದ್ದಾರೆ.
ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡುಗೆ ಅನಿಲ ಸಂಪರ್ಕ ಇಲ್ಲದ ಬಡವರು ತಪ್ಪದೇ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಆರಂಭದಲ್ಲಿ ಸಾಮಾಜಿಕ ಆರ್ಥಿಕ ಸಮೀಕ್ಷೆಯ ವರದಿಯಲ್ಲಿರುವ ದೇಶದ ಸುಮಾರು ಐದು ಕೋಟಿ ಬಿಪಿಎಲ್ ಕುಟುಂಬಗಳಿಗೆ ಸಂಪರ್ಕ ನೀಡಲಾಗಿತ್ತು ಎಂದವರು ವಿವರಿಸಿದರು.
ನಂತರ ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರರಿಗೆ ನೀಡಲಾಯಿತು. ಕೆಲವು ಕುಟುಂಬ ವಿವಿಧ ಕಾರಣಗಳಿಂದಾಗಿ ಅಡುಗೆ ಅನಿಲ ಸಂಪರ್ಕ ಪಡೆದು ಕೊಂಡಿಲ್ಲ. ಅಂಥ ಕುಟುಂಬಗಳನ್ನು ಗುರುತಿಸಿ ಎಲ್‌ಪಿಜಿ ಸಂಪರ್ಕ ನೀಡುವ ಮೂಲಕ ಸಂಪೂರ್ಣ ಸಂಪರ್ಕ ನೀಡಿ ಶೇ.100 ಸಾಧನೆ ಮಾಡುವುದು ಪಿಎಂಯುವೈ-2ರ ಉದ್ದೇಶವಾಗಿದೆ ಎಂದರು.
ಯೋಜನೆ ಜಾರಿಗೆ ಬರುವ ಮೊದಲು ಜಿಲ್ಲೆಯಲ್ಲಿ ಶೇ. 85 ಕುಟುಂಬಗಳು ಅಡುಗೆ ಅನಿಲ ಸಂಪರ್ಕ ಹೊಂದಿದ್ದವು. ಯೋಜನೆಯಲ್ಲಿ ಈ ಜಿಲ್ಲೆಗೆ 15,400 ಹೊಸ ಅಡುಗೆ ಅನಿಲ ಸಂಪರ್ಕ ನೀಡಲಾಗಿದ್ದು, ಜಿಲ್ಲೆಯಲ್ಲಿ 2,73,177 ಕುಟುಂಬಗಳು (ಶೇ.96) ಅಡುಗೆ ಅನಿಲ ಸಂಪರ್ಕ ಹೊಂದಿವೆ. ಬಾಕಿ ಇರುವ ಶೇ.4 ಕುಟುಂಬಗಳಿಗೆ ಉಜ್ವಲ ಯೋಜನೆಯಡಿ ಸಂಪರ್ಕ ನೀಡುವ ಮೂಲಕ ಜಿಲ್ಲೆಯನ್ನು ಕಟ್ಟಿಗೆ ಹಾಗೂ ಸೀಮೆಎಣ್ಣೆ ಬಳಕೆ ರಹಿತ ಜಿಲ್ಲೆಯನ್ನಾಗಿ ಮಾಡುವ ಗುರಿ ಹಾಕಿಕೊಳ್ಳಲಾಗಿದೆ ಎಂದರು.
ಹಿಂದೂಸ್ತಾನ್ ಪೆಟ್ರೋಲಿಯಂ ಕಂಪೆನಿ ಹಿರಿಯ ಪ್ರಾದೇಶಿಕ ಪ್ರಬಂಧಕ ರಮೇಶ್ ನಟರಾಜನ್ ಮಾತನಾಡಿ, ಬಿಪಿಎಲ್ ಕಾರ್ಡ್ ಇದ್ದವರು ಸಂಪರ್ಕ ಪಡೆಯಬಹುದು. ಬಿಪಿಎಲ್ ಕಾರ್ಡ್ ಇಲ್ಲದವರೂ 14 ಷರತ್ತುಗಳ ಫಾರಂಗೆ ಸಹಿ ಹಾಕಿ, ಸಂಪರ್ಕ ಪಡೆಯಬಹುದು. ಹತ್ತಿರದ ಗ್ಯಾಸ್ ಡೀಲರ್ ಬಳಿಗೆ ಹೋಗಿ ಸೌಲಭ್ಯವನ್ನು ಪಡೆಯಬಹುದು ಎಂದರು. ಮೊದಲ ಸಂಪರ್ಕ ಪಡೆಯುವಾಗ ನೀಡಲಾಗುವ 999ರೂ.ಗಳ ಅಡುಗೆ ಸ್ಟೌ ಮತ್ತು ಸಿಲಿಂಡರ್‌ನ ಬೆಲೆಯನ್ನು ಫಲಾನುಭವಿ ನೀಡಬೇಕಾಗುತ್ತದೆ. ಆದರೆ ಅದನ್ನು ಫಲಾನುಭವಿಗೆ ನೀಡಲು ಸಾಧ್ಯವಾಗದಿದ್ದಲ್ಲಿ, ಅವರಿಗೆ ಸಿಗುವ ಸಹಾಯಧನದಿಂದ ಹೊಂದಾಣಿಕೆ ಮಾಡಿಕೊಳ್ಳಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.
ಅಡುಗೆ ಅನಿಲ ವಿತರಕ ಉಡುಪಿಯ ಬಾಲಾಜಿ ರಾಘವೇಂದ್ರ ರಾವ್ ಮತ್ತು ಕಾರ್ಕಳದ ನಿತ್ಯಾನಂದ ಪೈ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.