ಮಲ್ಪೆ ಬೋಟು ನಾಪತ್ತೆ ಪ್ರಕರಣ: ಮೀನುಗಾರರು, ಪೊಲೀಸರ 2 ತಂಡ ಗೋವಾ, ಮಹಾರಾಷ್ಟ್ರಕ್ಕೆ
ಉಡುಪಿ, ಡಿ.28: ಏಳು ಮಂದಿ ಮೀನುಗಾರರೊಂದಿಗೆ ಮಲ್ಪೆ ಬಂದರಿ ನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿ ಡಿ.15ರ ರಾತ್ರಿಯಿಂದ ನಾಪತ್ತೆ ಯಾಗಿರುವ ‘ಸುವರ್ಣ ತ್ರಿಭುಜ’ ಮೀನುಗಾರಿಕಾ ಬೋಟಿನ ಸುಳಿವು 18ನೇ ದಿನವಾದ ಇಂದು ಸಹ ಸಿಕ್ಕಿಲ್ಲ. ಇನ್ನು ಸಮುದ್ರ ಮತ್ತು ನದಿಗಳಲ್ಲಿ ಬೋಟಿನ ಪತ್ತೆಯ ಪ್ರಯತ್ನವನ್ನು ಕೈಬಿಟ್ಟು ಗೋವಾ-ಮಹಾರಾಷ್ಟ್ರಗಳ ಗಡಿ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಬೋಟು ಮತ್ತು ಮೀನುಗಾರರ ಪತ್ತೆಗಾಗಿ ಪ್ರಯತ್ನಗಳು ಮುಂದುವರಿದಿವೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ.ನಿಂಬರಗಿ ಅವರೊಂದಿಗೆ ಮಲ್ಪೆ ಮೀನುಗಾರರ ಸಂಘದ ಪದಾಧಿಕಾರಿಗಳು ಹಾಗೂ ಹಿರಿಯ ಮೀನುಗಾರರು ಗುರುವಾರ ಸಂಜೆ ಸುಮಾರು ಐದು ಗಂಟೆಗಳ ಕಾಲ ಸುಧೀರ್ಘ ಚರ್ಚೆ ನಡೆಸಿದ್ದು, ತಲಾ ಐವರು ಉನ್ನತ ಪೊಲೀಸ್ ಅಧಿಕಾರಿಗಳ ಹಾಗೂ ಸ್ಥಳೀಯ ಮೀನುಗಾರರ ಎರಡು ತಂಡಗಳನ್ನು ಕಳುಹಿಸಲು ನಿರ್ಧರಿಸಲಾಗಿದೆ ಎಂದವರು ‘ವಾರ್ತಾಭಾರತಿ’ಗೆ ತಿಳಿಸಿದರು.
ಇದರಂತೆ ತಲಾ 10 ಸದಸ್ಯರ ಎರಡು ತಂಡಗಳು ಡಿವೈಎಸ್ಪಿ ಜೈಶಂಕರ್ ಹಾಗೂ ಶರತ್ ಅವರ ನೇತೃತ್ವದಲ್ಲಿ ನಿನ್ನೆ ರಾತ್ರಿಯೇ ಉಡುಪಿಯಿಂದ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ತೆರಳಿದ್ದು, ಬೋಟು ಹಾಗೂ ಮೀನುಗಾರರ ಪತ್ತೆ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಳ್ಳಲಿವೆ. ಈ ಮೊದಲು ಮಲ್ಪೆಯಿಂದ ತೆರಳಿದ ಮೀನುಗಾರರ ಮೂರು ತಂಡಗಳು ಕಾರವಾರ, ಗೋವಾ ಮತ್ತು ಮಹಾರಾಷ್ಟ್ರಗಳ ಕರಾವಳಿ ಕಾವಲು ಪಡೆ ಅಧಿಕಾರಿಗಳೊಂದಿಗೆ ಸೇರಿ ಹುಡುಕಾಟದಲ್ಲಿದ್ದು, ಅದು ತನ್ನ ಕಾರ್ಯವನ್ನು ಮುಂದುವರಿಸಿವೆ ಎಂದು ಸತೀಶ್ ಕುಂದರ್ ತಿಳಿಸಿದರು.
ಇವರೊಂದಿಗೆ ಗೋವಾದಲ್ಲಿರುವ ಕನ್ನಡಿಗರೂ ನಾಪತ್ತೆಯಾಗಿರುವ ಮೀನುಗಾರರ ಶೋಧ ಕಾರ್ಯದಲ್ಲಿ ಸಹಕರಿಸುತಿದ್ದಾರೆ. ಆದರೆ ಗಾಳಿಸುದ್ದಿ ಗಳು ಕೇಳಿಬರುತ್ತಿವೆಯೇ ಹೊರತು ಖಚಿತವಾದ ಸುಳಿವು, ಪುರಾವೆಗಳೇನೂ ಇನ್ನು ಲಭ್ಯವಾಗಿಲ್ಲ ಎಂದವರು ಹೇಳಿದರು.
ಆದರೆ ಬೋಟು ಮತ್ತು ಮೀನುಗಾರರು ನಾಪತ್ತೆಯಾಗಿ 18 ದಿನಗಳು ಕಳೆದಿರುವುದರಿಂದ ಬೋಟು ಯಾವುದೇ ರೀತಿಯ ದುರ್ಘಟನೆಗೆ ತುತ್ತಾಗಿರುವ ಸಾಧ್ಯತೆ ಶೇ.100ರಷ್ಟು ಇಲ್ಲವಾಗಿದೆ. ಸಮುದ್ರ ಕಳ್ಳರು ಅಥವಾ ಭಯೋತ್ಪಾದಕರ ಕೃತ್ಯದ ಸಾಧ್ಯತೆಯನ್ನೂ ಸಂಪೂರ್ಣವಾಗಿ ತಳ್ಳಿಹಾಕಲಾಗಿದೆ. ಏಕೆಂದರೆ ಬೋಟು ನಾಪತ್ತೆಯಾದ ಸಮಯದಲ್ಲಿ ಈ ಭಾಗದ ಸಮುದ್ರದಲ್ಲಿ ಯಾವುದೇ ಹಡಗುಗಳ ಸಂಚಾರವಿದ್ದಿರಲೇ ಇಲ್ಲ ಎಂದು ಕೋಸ್ಟ್‌ಗಾರ್ಡ್ ಹಾಗೂ ನೌಕಾಪಡೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ ಎಂದು ಕುಂದರ್ ವಿವರಿಸಿದರು.
ಹೀಗಾಗಿ ಇನ್ನು ಉಳಿದಿರುವುದು ಸ್ಥಳೀಯರಿಂದ ಬೋಟಿನ ಅಪಹರಣ ಹಾಗೂ ಮೀನುಗಾರರ ಬಂಧಿಸಿಟ್ಟಿರುವ ಸಾಧ್ಯತೆ ಮಾತ್ರ. ಆದರೆ ಬೋಟು ಸಮುದ್ರ ಹಾಗೂ ನದಿಯುದ್ದಕ್ಕೂ ಕಂಡುಬಂದಿಲ್ಲವಾದ್ದರಿಂದ ಬೋಟನ್ನು ಮೇಲಕ್ಕೆ ಎಳೆದು, ಕಲರ್ ಕೋಡಿಂಗ್ ಆದ ಅದರ ಬಣ್ಣವನ್ನು ಬದಲಾಯಿಸಿ ಅಡಗಿಸಿಟ್ಟಿರಬಹುದು ಹಾಗೂ ಮೀನುಗಾರರನ್ನು ಬಂಧಿಸಿಟ್ಟರಬಹುದು. ಇದಕ್ಕಾಗಿಯೇ ಉಡುಪಿ ಎಸ್ಪಿಯವರೊಂದಿಗೆ ಚರ್ಚಿಸಿ, ಅವರ ಸಹಕಾರದಿಂದ ಮೀನುಗಾರರು ಹಾಗೂ ಪೊಲೀಸರ ತಂಡವನ್ನು ಗೋವಾ ಮತ್ತು ಮಹಾರಾಷ್ಟ್ರಗಳಿಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದರು.
ಆದರೆ ಗೋವಾ ಮತ್ತು ಮಹಾರಾಷ್ಟ್ರಗಳಲ್ಲಿ ಪೊಲೀಸ್ ಗುಪ್ತಚರ ವಿಭಾಗದ ವೈಫಲ್ಯ ಇಲ್ಲಿ ಎದ್ದುಕಾಣುತ್ತಿದೆ ಎಂದ ಅವರು, ನಾಪತ್ತೆಯಾದ ಏಳು ಮಂದಿ ಮೀನುಗಾರರ ಕುಟುಂಬಗಳಿಗೆ ಸಮಾಧಾನ ಹೇಳುವುದು, ಧೈರ್ಯ ತುಂಬುವುದು ನಮಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದರು.