ಪಿಎನ್‌ಬಿ ವಂಚನೆ: ತನಿಖೆಯಲ್ಲಿ ಮಧ್ಯೆಪ್ರವೇಶಿಸಲು ಸುಪ್ರೀಂ ನಿರಾಕರಣೆ

Update: 2018-12-28 16:58 GMT

ಹೊಸದಿಲ್ಲಿ, ಡಿ. 28: ಪಂಜಾಬ್ ನ್ಯಾಶನಲ್ ಬ್ಯಾಂಕ್‌ನ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮಧ್ಯೆ ಪ್ರವೇಶಿಸಲು ಅಥವಾ ಮೇಲ್ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸುವುದರೊಂದಿಗೆ ಕೇಂದ್ರ ಸರಕಾರ ಕಾನೂನಾತ್ಮಕ ಜಯ ಗಳಿಸಿದೆ. ಭಾರೀ ಹಗರಣ ಬೆಳಕಿಗೆ ಬಂದ ಬಳಿಕ ವಜ್ರೋದ್ಯಮಿ ನೀರವ್ ಮೋದಿ ದೇಶದಿಂದ ಪರಾರಿಯಾಗಿರುವ ಸಂದರ್ಭದ ಬಗ್ಗೆ ಸಿಟ್ ತನಿಖೆ ನಡೆಸಲು ಆದೇಶ ನೀಡಬೇಕು ಎಂಬ ಮನವಿಯನ್ನು ಕೂಡ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ವಿನೀತ್ ಧಂಡಾ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ನ್ಯಾಯಮೂರ್ತಿ ಕೆ. ಕೌಲ್ ನೇತೃತ್ವದ ಪೀಠ ತಿರಸ್ಕರಿಸಿದೆ.

ಈ ಸಾರ್ವಜನಿಕ ಹಿತಾಸಕ್ತಿ ದಾವೆ ಮೊದಲ ಬಾರಿಗೆ ಕೌಲ್ ಅವರ ಮುಂದೆ ವಿಚಾರಣೆಗೆ ಬಂದಿದೆ. ಈ ಹಿಂದೆ ಫೆಬ್ರವರಿಯಿಂದ 6 ವಿಭಿನ್ನ ದಿನಾಂಕಗಳಲ್ಲಿ ಇತರ ಪೀಠಗಳ ಮುಂದೆ ವಿಚಾರಣೆಗೆ ಪರಿಗಣಿಸಲಾಗಿತ್ತು. ಸಂವಿಧಾನದ ಕಲಂ 32 ಅಡಿಯಲ್ಲಿ ಸಲ್ಲಿಸಲಾದ ಈ ಮನವಿ ಸ್ವೀಕರಿಸುವ ಒಲವನ್ನು ನಾವು ಹೊಂದಿಲ್ಲ. ರಿಟ್ ದೂರನ್ನು ತಿರಸ್ಕರಿಸಲಾಗಿದೆ ಎಂದು ನ್ಯಾಯಮೂರ್ತಿ ದೀಪಕ್ ಗುಪ್ತಾ ಅವರನ್ನು ಕೂಡ ಒಳಗೊಂಡ ಪೀಠ ತನ್ನ ಇತ್ತೀಚೆಗಿನ ಆದೇಶದಲ್ಲಿ ಹೇಳಿದೆ.

ಸರಕಾರದ ಪರವಾಗಿ ಹಾಜರಾಗಿದ್ದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ದೂರಿನ ಸಮರ್ಥನೀಯತೆಯ ವಿರುದ್ಧ ಆಕ್ಷೇಪ ಎತ್ತಿದರು. ಈ ವಿಷಯದ ಕುರಿತು ಈಗಾಗಲೇ ತನಿಖೆ ನಡೆಯುತ್ತಿರುವುದರಿಂದ ನ್ಯಾಯಾಲಯ ಮಧ್ಯ ಪ್ರವೇಶಿಸುವ ಅಗತ್ಯ ಇಲ್ಲ ಎಂದು ಅವರು ವಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News