ಹಿಮ ರಾಶಿಯಲ್ಲಿ ಬಿದ್ದಿದ್ದ ಹೆಲಿಕಾಪ್ಟರನ್ನು ಸುರಕ್ಷಿತವಾಗಿ ಹಾರಿಸಿದ ಸೇನೆ!

Update: 2018-12-28 17:18 GMT

ಹೊಸದಿಲ್ಲಿ,ಡಿ.28: ಸಮುದ್ರ ಮಟ್ಟದಿಂದ 18,000 ಅಡಿ ಎತ್ತರದಲ್ಲಿ ಚಳಿ ಮತ್ತು ರಕ್ತ ಹೆಪ್ಪುಗಟ್ಟಿಸುವ ಹಿಮಗಾಳಿಯಲ್ಲಿ ಉಸಿರಾಡುವುದೇ ದೊಡ್ಡ ಹೋರಾಟ ಎಂಬ ಸ್ಥಿತಿಯಿರುವ ಮಧ್ಯೆಯೂ ಹಾಳಾಗಿ ಬಿದ್ದಿದ್ದ ಹೆಲಿಕಾಪ್ಟರನ್ನು ದುರಸ್ಥಿಗೊಳಿಸಿ ಸುರಕ್ಷಿತ ನೆಲೆಗೆ ಹಾರಿಸುವ ಮೂಲಕ ಭಾರತೀಯ ಸೇನೆ ಅಭೂತಪೂರ್ವ ಸಾಧನೆ ಮಾಡಿದೆ ಎಂದು ಸೇನೆಯ ಪ್ರಕಟನೆಯಲ್ಲಿ ತಿಳಿಸಿದೆ.

ಎಎಲ್‌ಎಚ್ ಧ್ರುವ ಹೆಲಿಕಾಪ್ಟರ್ ಕಳೆದ ಜನವರಿಯಲ್ಲಿ ಜಗತ್ತಿನ ಅತೀ ಎತ್ತರದ ಯುದ್ಧಭೂಮಿ ಸಿಯಾಚಿನ್ ಹಿಮಗಡ್ಡೆಯಲ್ಲಿ ಕಳೆದುಹೋಗಿತ್ತು. ಹೆಲಿಕಾಪ್ಟರ್‌ನ ಪೈಲಟ್ ಅದನ್ನು ಹೆಲಿಪ್ಯಾಡ್‌ನಲ್ಲಿ ಇಳಿಸಲಾಗದೆ ಕಾಂಡ ಎಂಬಲ್ಲಿ ಹಿಮದ ಮೇಲೆ ಇಳಿಸಿದ್ದರು. ಈ ಪ್ರದೇಶದಲ್ಲಿ ವಿಪರೀತ ಹಿಮಮಳೆ ಸುರಿದ ಕಾರಣ ನಿಲ್ಲಿಸಲಾಗಿದ್ದ ಹೆಲಿಕಾಪ್ಟರ್ ಅಡ್ಡ ಬಿದ್ದಿತ್ತು. ಈ ಹೆಲಿಕಾಪ್ಟರನ್ನು ಸರಿಪಡಿಸಲು ಸೇನೆಯು ಹಲವು ಪ್ರಯತ್ನಗಳನ್ನು ಮಾಡಿದರೂ ಫಲ ನೀಡಿರಲಿಲ್ಲ. ಅಂತಿಮವಾಗಿ ಸೇನೆಯ ಎಎಲ್‌ಎಚ್ 203 ವಿಭಾಗದ ತಂತ್ರಜ್ಞರು ಮತ್ತು ಪೈಲಟ್‌ಗಳು ಸೇರಿ ಈ ಹೆಲಿಕಾಪ್ಟರನ್ನು ಸರಿಯಾಗಿ ನಿಲ್ಲಿಸಿ ದುರಸ್ಥಿಗೊಳಿಸಿ ಸಿಯಾಚಿನ್ ಶಿಬಿರಕ್ಕೆ ಮರಳಿ ಹಾರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News