×
Ad

ಮುಸ್ಲಿಂ ಸಮುದಾಯ ಭವನ ನಿರ್ಮಾಣಕ್ಕೆ ನೆರವು: ಸಚಿವ ಯು.ಟಿ.ಖಾದರ್

Update: 2018-12-29 18:20 IST

ಮಂಗಳೂರು, ಡಿ. 29: ಸಮಾಜದಲ್ಲಿ ಶಾಂತಿ-ಸೌಹಾರ್ದಕ್ಕೆ ಪಣತೊಡುವ ಮತ್ತು ಮತೀಯ ಗಲಭೆ ಸಹಿತ ತುರ್ತು ಸಂದರ್ಭಗಳಲ್ಲಿ ಅವಿಸ್ಮರಣೀಯ ಸೇವೆಗೈಯುವ ಮೂಲಕ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಮನೆಮಾತಾಗಿರುವ ‘ದಿ ಮುಸ್ಲಿಂ ಸೆಂಟ್ರಲ್ ಕಮಿಟಿ’ಯು ತನ್ನ ಸ್ವರ್ಣ ಮಹೋತ್ಸವದ ಸವಿನೆನಪಿಗಾಗಿ ಮುಸ್ಲಿಂ ಸಮುದಾಯ ಭವನ ನಿರ್ಮಾಣಕ್ಕೆ ಮುಂದಾದರೆ ಸಂಪೂರ್ಣ ನೆರವು ನೀಡಲಾಗುವುದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.

ನಗರದ ಪುರಭವನದಲ್ಲಿ ಶನಿವಾರ ಜರುಗಿದ ಅವಿಭಜಿತ ದ.ಕ.ಜಿಲ್ಲೆಯ ‘ದಿ ಮುಸ್ಲಿಂ ಸೆಂಟ್ರಲ್ ಕಮಿಟಿ’ಯ ಸ್ವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ‘ಸ್ವರ್ಣ ಮಹೋತ್ಸವ ಸಂಭ್ರಮ’ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸಮಾಜ ಸೇವೆ ಮಾಡುವಾಗ ಟೀಕೆಗಳು ಸಹಜ. ಟೀಕೆಗಳನ್ನೇ ಸವಾಲಾಗಿ ಸ್ವೀಕರಿಸಿಕೊಂಡು ಮುನ್ನಡೆಯಬೇಕು ಮತ್ತು ಸರಕಾರವು ಜಾರಿಗೊಳಿಸುತ್ತಿ ರುವ ಅನೇಕ ಹೊಸ ಹೊಸ ಯೋಜನೆಗಳನ್ನು ಸಮಾಜದ ಜನತೆಗೆ ಸಿಗುವಂತಾಗಲು ಮುಂದಾಗಬೇಕು. ವಿದೇಶದಿಂದ ಉದ್ಯೋಗ ಕಳಕೊಂಡು ಮರಳಿ ಬರುವವರ ಡಾಟಾ ಸಂಗ್ರಹಿಸಿ ಅವರಿಗೆ ನೆರವು ನೀಡಲು ಪ್ರಯತ್ನಿಸಬೇಕು ಎಂದು ಯು.ಟಿ. ಖಾದರ್ ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಜಿ ಕೆ.ಎಸ್. ಮುಹಮ್ಮದ್ ಮಸೂದ್ ‘ಮುಂದಿನ ಲೋಕಸಭಾ ಚುನಾವಣೆಯ ಸಂದರ್ಭ ದ.ಕ. ಜಿಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಮುಸ್ಲಿಮ್ ಅಭ್ಯರ್ಥಿ ಸ್ಪರ್ಧಿಸಲು ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಬೇಕು. ಇದು ಭಿಕ್ಷೆಯಲ್ಲ. ಮುಸ್ಲಿಮರ ಹಕ್ಕಾಗಿದೆ. ಅದಕ್ಕಾಗಿಯೇ ಈಗಾಗಲೆ ಪಾರ್ಲಿಮೆಂಟರಿ ಆ್ಯಕ್ಷನ್ ಸಮಿತಿಯೊಂದನ್ನು ರಚಿಸಲಾಗಿದೆ. ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಸಿಗದಿದ್ದರೆ ಆ ಸಮಿತಿಯ ನಿರ್ಣಯದಂತೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ‘ಮುಸ್ಲಿಂ ಸಮಾಜದಲ್ಲಿ ಅನೇಕ ಯುವಪ್ರತಿಭಾವಂತರಿದ್ದಾರೆ. ಶೈಕ್ಷಣಿಕವಾಗಿಯೂ ಮುಂದಿದ್ದಾರೆ. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಸಮಾಜದ ಮುಖ್ಯವಾಹಿನಿಗೆ ಬರುವಂತಹ ಜವಾಬ್ದಾರಿಯನ್ನು ಮುಸ್ಲಿಂ ಸೆಂಟ್ರಲ್ ಕಮಿಟಿ ಹೊತ್ತುಕೊಳ್ಳಬೇಕು’ ಎಂದರಲ್ಲದೆ, ‘ಮುಸ್ಲಿಮರ ದೇಶಭಕ್ತಿಯನ್ನು ಪ್ರಶ್ನಿಸುವ ಅಗತ್ಯವಿಲ್ಲ. ಅದು ಅವರ ರಕ್ತಗತವಾಗಿದೆ. ಮತೀಯ ಅಲ್ಪಸಂಖ್ಯಾತರ ಬಗ್ಗೆ ಪೊಲೀಸ್ ಇಲಾಖೆಯು ಹೊಂದಿರುವ ಮಲತಾಯಿ ಧೋರಣೆ ಕೈಬಿಡಬೇಕಿದೆ’ ಎಂದರು.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ಮಾಜಿ ಶಾಸಕ ಜೆ.ಆರ್.ಲೋಬೊ, ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಂ.ಎ.ಗಫೂರ್, ರಾಜ್ಯ ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಜಿ ಬಿ.ಎಚ್.ಖಾದರ್, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಉಪ ಮೇಯರ್ ಮುಹಮ್ಮದ್ ಕುಂಜತ್ತಬೈಲ್, ಕಾರ್ಪೊರೇಟರ್ ಅಬ್ದುಲ್ ಲತೀಫ್ ಕಂದಕ್, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಮಾಜಿ ರಾಜ್ಯಸಭಾ ಸದಸ್ಯ ಬಿ. ಇಬ್ರಾಹೀಂ, ಪಿಎಫ್‌ಐ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಬ್, ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವಾ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಅಬ್ದುರ್ರವೂಫ್ ಪುತ್ತಿಗೆ, ಜಮೀಯ್ಯತುಲ್ ಫಲಾಹ್ ದ.ಕ.ಜಿಲ್ಲಾಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್, ನ್ಯಾಯವಾದಿ ಮುಝಫ್ಫರ್ ಅಹ್ಮದ್, ಬಂಟ್ವಾಳ ಮುಸ್ಲಿಂ ಸಮಾಜದ ಕಾರ್ಯದರ್ಶಿ ಹನೀಫ್ ಖಾನ್ ಕೊಡಾಜೆ, ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ, ಹಿದಾಯ ಫೌಂಡೇಶನ್‌ನ ಅಧ್ಯಕ್ಷ ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು, ಮಾಜಿ ಉಪಮೇಯರ್ ಬಶೀರ್ ಬೈಕಂಪಾಡಿ, ‘ನಂಡೆಪೆಂಙಳ್’ನ ಅಧ್ಯಕ್ಷ ನೌಶಾದ್ ಹಾಜಿ ಸೂರಲ್ಪಾಡಿ ಮತ್ತಿತರರು ಭಾಗವಹಿಸಿದ್ದರು.

ಕಾರ್ಯಕ್ರಮದ ಸಂಚಾಲಕ ಹಾಜಿ ಇಬ್ರಾಹೀಂ ಕೋಡಿಜಾಲ್ ಸ್ವಾಗತಿಸಿದರು. ಕಮಿಟಿಯ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ ಬಂದರ್ ವಂದಿಸಿದರು. ಬ್ಯಾರಿ ಅಕಾಡಮಿಯ ಸದಸ್ಯ ಹುಸೈನ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. 

ಸೆಂಟ್ರಲ್ ಕಮಿಟಿಯ ಸ್ವರ್ಣ ಮಹೋತ್ಸವದ ಹಿನ್ನಲೆಯಲ್ಲಿ ಅರ್ಹ 50 ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News