×
Ad

ಉಡುಪಿ: ಜ.19ರಿಂದ ಜಿಲ್ಲಾಮಟ್ಟದ ಉದ್ಯೋಗ ಮೇಳ

Update: 2018-12-29 19:36 IST

ಉಡುಪಿ, ಡಿ.29: ಅಜ್ಜರಕಾಡು ಡಾ. ಜಿ. ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಜ.19 ಮತ್ತು 20ರಂದು ಆಯೋಜಿಸಲಾಗಿದೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಉಡುಪಿಯಲ್ಲಿಂದು ಕರೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.ಮೇಳದಲ್ಲಿ 150ಕ್ಕಿಂತಲೂ ಅಧಿಕ ಸಂಸ್ಥೆಗಳು ನೋಂದಣಿಯಾಗಿದ್ದು, ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.

ಇಗ್ನೋ ಸೆಂಟರ್ ಉದ್ಘಾಟನೆ: ಉಡುಪಿಯಲ್ಲಿ ಇಂದಿರಾಗಾಂಧಿ ಮುಕ್ತ ವಿವಿ ಅಧ್ಯಯನ ಕೇಂದ್ರವನ್ನು ಜ.19ರಂದು ಕಾಲೇಜಿನಲ್ಲಿ ಉದ್ಘಾಟಿಸಲಾಗುವುದು. ಜ.15ರವರೆಗೆ ಪ್ರವೇಶಾತಿಗೆ ಇಲ್ಲಿ ಅವಕಾಶವಿದ್ದು, ಆನ್‌ಲೈನ್‌ನಲ್ಲಿ ನೋಂದಣಿ ಮಾಡಕೊಳ್ಳಬೇಕು ಎಂದರು.

ಕಾರ್ಯಕ್ರಮ ಆಯೋಜಕರಾದ ಸಂಚಲನ ಸ್ವಯಂ ಸೇವಾ ಸಂಘಟನೆ ಅಧ್ಯಕ್ಷ ಪ್ರೇಮ್‌ಪ್ರಸಾದ್ ಶೆಟ್ಟಿ ಮಾತನಾಡಿ, 18 ರಿಂದ 40 ವರ್ಷ ವಯೋ ಮಿತಿಯ ವಿದ್ಯಾರ್ಥಿಗಳು, ಯುವಕ-ಯುವತಿಯರು ಭಾಗವಹಿಸಲು ಅವಕಾಶ ನೀಡಲಾಗಿದ್ದು, ಜ.19ರಂದು ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರು, 20ರಂದು ಎಸ್ಸೆಸೆಲ್ಸಿ, ಪಿಯುಸಿ ಹಾಗೂ ಅದಕ್ಕಿಂತ ಕಡಿಮೆ ಶಿಕ್ಷಣ ಪಡೆದರು ಭಾಗವಹಿಸಬಹುದು ಎಂದರು.

ಒಬ್ಬರಿಗೆ 3 ಕಂಪೆನಿಗಳಿಗೆ ಸಂದರ್ಶನ ನೀಡಲು ಅವಕಾಶವಿದೆ. ಜ.12ರಂದು ಕಾಲೇಜಿನಲ್ಲಿ ಸಂದರ್ಶನ ಎದುರಿಸುವ ಬಗ್ಗೆ ನುರಿತ ತಜ್ಞರಿಂದ ತರಬೇತಿ ನೀಡಲಾಗುವುದು. ಶೇ.50ರಷ್ಟು ಉದ್ಯೋಗವನ್ನು ಸ್ಥಳೀಯವಾಗಿ ಒದಗಿಸಲು ಪ್ರಯತ್ನಿಸಲಾಗುತ್ತದೆ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ. ಭಾಸ್ಕರ ಶೆಟ್ಟಿ, ಪ್ರಾಧ್ಯಾಪಕ ಶ್ರೀಧರ ಭಟ್, ಸಮಿತಿ ಸದಸ್ಯ ಪ್ರಮೋದ್ ಉಪಸ್ಥಿತರಿದ್ದರು.

ಮೀನುಗಾರರ ಪತ್ತೆಗೆ ಪ್ರಧಾನಿಗೆ ಮನವಿ

ಡಿ.13ರಂದು ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ 6 ಮಂದಿ ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸೂಚನೆ ಮೇರೆಗೆ ನೌಕಾದಳದ ಹೆಲಿಕಾಷ್ಟರ್ ಕೂಬಿಂಗ್ ನಡೆಸುತ್ತಿದ್ದು, ಇದುವರೆಗೆ ಯಾವುದೇ ಸುಳಿವು ದೊರೆತಿಲ್ಲ. ಭಯೋತ್ಪಾದನಾ ಜಾಲದ ಆಯಾಮದಲ್ಲೂ ತನಿಖೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇನೆ ಎಂದು ಶಾಸಕ ಭಟ್ ತಿಳಿಸಿದರು.

ಪ್ರಮೋದ್ ಅವರೇ ಕ್ರೆಡಿಟ್ ತೆಗೆದುಕೊಳ್ಳಲಿ

ಮರಳುಗಾರರ ಸಂಘದ ಸದಸ್ಯರು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಭೇಟಿಯಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕ ಭಟ್, ಪ್ರಮೋದ್ ಅವರೇ ಕ್ರೆಡಿಟ್ ತೆಗೆದುಕೊಳ್ಳಲಿ. ಮರಳುಗಾರರ ಸನ್ಮಾನ ಬೇಕಾದರೂ ಮಾಡಲಿ. ನನಗೇನು ಬೇಜಾರಿಲ್ಲ. ಒಟ್ಟಿನಲ್ಲಿ ಜಿಲ್ಲೆಯ ಜನರಿಗೆ ಮರಳು ಸಿಗಬೇಕು ಎಂದರು.

ಮರಳುಗಾರಿಕೆಗೆ ಕೇಂದ್ರ ಅನುಮತಿ ನೀಡಲು ಸಾಧ್ಯವಿಲ್ಲ. ಸಿಆರ್‌ಝಡ್ ವ್ಯಾಪ್ತಿಯಲ್ಲಿ ದಿಬ್ಬ ತೆರವು ಮಾತ್ರ ಮಾಡಬಹುದು. ಅದಕ್ಕೆ ಬೇಕಾದ ಎಲ್ಲಾ ಸ್ಪಷ್ಟನೆಯನ್ನು ಕೇಂದ್ರ ಪರಿಸರ ಇಲಾಖೆ ರಾಜ್ಯ ಸರ್ಕಾರಕ್ಕೆ ನೀಡಿದೆ. ಆದರೆ ಸರಕಾರ ಶಾಸಕರ ಸಭೆಯನ್ನು ಉದ್ದೇಶಪೂರ್ವಕವಾಗಿ ಮುಂದೂಡುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News