ಉಡುಪಿ: ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅಂತ್ಯಸಂಸ್ಕಾರಕ್ಕೆ ಹುಟ್ಟೂರಿನಲ್ಲಿ ಸಿದ್ಧತೆ
ಉಡುಪಿ, ಡಿ.29: ಕಳೆದ ರಾತ್ರಿ ಹೈದರಾಬಾದ್‌ನ ಆಸ್ಪತ್ರೆಯೊಂದರಲ್ಲಿ ನಿಧನರಾದ ರಾಜ್ಯದ ದಿಟ್ಟ ಹಾಗೂ ಜನಪ್ರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಅಂತ್ಯ ಸಂಸ್ಕಾರಕ್ಕೆ ಅವರ ತಂದೆ-ತಾಯಿ ಬದುಕಿನ ಕೊನೆಯ ವರ್ಷಗಳಲ್ಲಿ ವಾಸವಾಗಿದ್ದ ಯಡಾಡಿಯಲ್ಲಿ ಸಿದ್ಧತೆಗಳು ನಡೆಯುತ್ತಿವೆ.
ಮಧುಕರ್ ಶೆಟ್ಟಿ ಅವರ ತಾಯಿ ಪ್ರಫುಲ್ಲ ಶೆಟ್ಟಿಯವರ ತವರು ಮನೆ ಯಡಾಡಿಯಲ್ಲಿದ್ದು, ಅಲ್ಲೇ ತಂದೆ ವಡ್ಡರ್ಸೆ ರಘುರಾಮ ಶೆಟ್ಟಿ ಅವರು ಮನೆಯೊಂದನ್ನು ನಿರ್ಮಿಸಿದ್ದರು. ಇದೇ ಮನೆಯ ಆವರಣದಲ್ಲಿ ಮಧುಕರ ಶೆಟ್ಟಿ ಅವರ ಅಂತ್ಯಕ್ರಿಯೆಗೆ ಸಿದ್ಧತೆಗಳು ನಡೆಯುತ್ತಿವೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ನೇತೃತ್ವದಲ್ಲಿ ಉನ್ನತಾಧಿಕಾರಿಗಳ ತಂಡ ಸಿದ್ಧತೆಯಲ್ಲಿ ಭಾಗಿಯಾಗಿದೆ. ಇಲ್ಲೇ ಇರುವ ಮಧುಕರ ಶೆಟ್ಟಿ ಅವರ ತಂದೆ ತಾಯಿ ಸಮಾಧಿ ಪಕ್ಕದಲ್ಲೆ ಅಂತ್ಯಕ್ರಿಯೆ ನಡೆಸಲು ಅನುವು ಮಾಡಲಾಗುತ್ತಿದೆ. ಅಡಿಕೆ ಸಸಿಗಳನ್ನು ಜೆಸಿಬಿಯಿಂದ ತೆರವು ಗೊಳಿಸಿ ಭೂಮಿ ಸಮತಟ್ಟು ಮಾಡಲಾಗಿದೆ. ಕುಂದಾಪುರ ತಹಶೀಲ್ಧಾರ್ ತಿಪ್ಪೆಸ್ವಾಮಿ ಹಾಗೂ ಹಿರಿಯ ಅಧಿಕಾರಿಗಳ ಸಮ್ಮಖದಲ್ಲಿ ಶೆಟ್ಟಿಯವರ ದೂರದ ಸಂಬಂಧಿಗಳು ಸಿದ್ದತೆಯಲ್ಲಿ ತೊಡಗಿಕೊಂಡಿದ್ದಾರೆ.
ಶನಿವಾರ ಮಧ್ಯರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ಮಧುಕರ್ ಶೆಟ್ಟಿ ಪಾರ್ಥಿವ ಶರೀರ ಹೆತ್ತವರ ಮೂಲ ಊರಿಗೆ ಅಗಮಿಸಲಿದೆ. ಕನ್ನಡದ ಖ್ಯಾತ ಪತ್ರಕರ್ತರಾಗಿದ್ದ ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಹುಟ್ಟೂರು ವಡ್ಡರ್ಸೆ ಸಹ ಯಡಾಡಿಗೆ ಸಮೀಪದಲ್ಲೇ ಇದೆ.
ರವಿವಾರ ಮುಂಜಾನೆ ಎಂಟು ಗಂಟೆಯ ಬಳಿಕ ಯಡಾಡಿ ಮನೆಯಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಹತ್ತು ಗಂಟೆಯ ವೇಳೆ ಅಂತಿಮ ಸಂಸ್ಕಾರ ಹಿಂದೂ ಸಂಪ್ರದಾಯದಂತೆ ವಿಧಿವತ್ತಾಗಿ ನಡೆಯಲಿದೆ. ಸ್ಥಳೀಯರಿಗೆ ಮಧುಕರ್ ಅವರ ಒಡನಾಟ ಕಮ್ಮಿಯಾದರೂ ಅವರ ಸಾಧನೆಗಳ ಬಗ್ಗೆ ಹೆಮ್ಮೆ ಇದೆ. ಅವರ ಸಾಧನೆಗಳನ್ನು ಪತ್ರಿಕೆ, ಟಿವಿಗಳಲ್ಲಿ ಓದಿ- ನೋಡಿ ಊರವರು ತಿಳಿದುಕೊಂಡಿದ್ದಾರೆ. ಬಾಲ್ಯದಲ್ಲಿ ಮಧುಕರ್‌ರನ್ನು ಎತ್ತಿ ಆಡಿಸಿದ್ದ ವನಜ ಎಂಬ ಮಹಿಳೆ ಅವರ ನಿಧನ್ಕೆ ಅತೀವ ದುಖ ವ್ಯಕ್ತಪಡಿಸಿದರು.
ವಡ್ಡರ್ಸೆ ನಿವಾಸಿಯಾದ ವನಜ, ಮಧುಕರ್ ಶೆಟ್ಟಿ ಅವರ ಬಾಲ್ಯವನ್ನು ನೆನೆದು ಕಣ್ಣೀರು ಹಾಕಿದರು. ಸಾಕಷ್ಟು ವರ್ಷಗಳ ಹಿಂದೆ ವಡ್ಡರ್ಸೆ ಜೊತೆಗೆ ಮಕ್ಕಳನ್ನು ನೋಡಿಕೊಳ್ಳಲು ಬೆಂಗಳೂರಿಗೆ ತೆರಳಿದ್ದ ವನಜ, ಸುಮಾರು ವರ್ಷ ಮಧುಕರ್ ಶೆಟ್ಟಿ ಅವರನ್ನು ಎತ್ತಿ ಆಡಿಸಿದ್ದರು. ನಾನು ಅವರ ಆರೈಕೆ ಮಾಡಿದ್ದೇನೆ. ಆತ ನಾನು ಆಡಿಸಿದ ಮಗು, ನನ್ನ ಕಣ್ಣ ಮುಂದೆ ಹೀಗೆ ಮೃತಪಟ್ಟಿರುವುದು ದುಃಖ ತಂದಿದೆ ಎಂದು ಗದ್ಗದಿತರಾದರು. ನಾಡಿನಲ್ಲಿ ಸಾಕಷ್ಟು ಮಂದಿ ಪೊಲೀಸ್ ಅಧಿಕಾರಿಗಳಿದ್ದರೂ ಇವರಷ್ಟು ಉತ್ತಮ ಹೆಸರು ಮಾಡಿದವರು ಬಹಳ ಜನರಿಲ್ಲ. ತಂದೆಯಂತೆ ಪ್ರಾಮಾಣಿಕರು, ಖಡಕ್ ಆಗಿದ್ದವರು. ಖಂಡಿತವಾಗಿ ಇದು ಸಾಯುವ ವಯಸ್ಸಲ್ಲ ಎಂದು ಮಾತೃ ಹೃದಯದ ವನಜ ದು:ಖವನ್ನು ಹಂಚಿಕೊಂಡರು.
ಯಡಾಡಿಯ ಕುಟುಂಬದ ಫಾರ್ಮ್ ಹೌಸ್‌ನಲ್ಲಿ ನಾಳೆ ಬೆಳಗ್ಗೆ 8 ಗಂಟೆಯಿಂದ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಡಿಜಿಪಿ ನೀಲಮಣಿ ರಾಜು ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು, ಜನಪ್ರತಿನಿಧಿಗಳು ರವಿವಾರ ಬೆಳಗ್ಗೆ 10 ಗಂಟೆಗೆ ಮಧುಕರ ಶೆಟ್ಟಿ ಅವರ ಅಂತ್ಯಸಂಸ್ಕಾರದ ವೇಳೆ ಉಪಸ್ಥಿತರಿರುವ ಸಾಧ್ಯತೆಗಳಿವೆ.
ಸಂತಾಪ: ಮಧುಕರ ಶೆಟ್ಟಿ ಅವರ ಹಠಾತ್ ನಿಧನಕ್ಕೆ ರಾಜ್ಯ ವಿಧಾನ ಪರಿಷತ್‌ನ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಮಧುಕರ ಶೆಟ್ಟಿ ಅವರ ಸಾವಿನ ಸುದ್ದಿ ಆಘಾತವನ್ನು ಉಂಟು ಮಾಡಿದೆ. ಉಡುಪಿ ಜಿಲ್ಲೆಯವರಾಗಿದ್ದು ದಕ್ಷ ಹಾಗೂ ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿದ್ದ ಇವರ ನಿಧನ ರಾಜ್ಯ ಪೊಲೀಸ್ ಇಲಾಖೆಗೆ ತುಂಬಲಾರದ ನಷ್ಟ ಎಂದಿದ್ದಾರೆ. ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಮಗನಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಡಿದ ರೀತಿ ಜಿಲ್ಲೆಗೆ ಹೆಮ್ಮೆ ತರುವಂತಾದ್ದು. ಇವರ ಸಾವಿನ ದು:ಖವನ್ನು ಭರಿಸುವ ಶಕ್ತಿಯನ್ನು ದೇವರು ಕುಟುಂಬ ವರ್ಗಕ್ಕೆ ಕರುಣಿಸಲಿ ಎಂದು ಹಾರೈಸಿದ್ದಾರೆ.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರು ಮಧುಕರ ಶೆಟ್ಟಿ ಅವರ ನಿದನಕ್ಕೆ ತನ್ನ ಸಂತಾಪ ವ್ಯಕ್ತಪಡಿಸಿದ್ದು, ಅವರ ಅಕಾಲಿನ ನಿಧನ ರಾಜ್ಯಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಹಾರೈಸಿದ್ದಾರೆ.