‘ಯಕ್ಷಗಾನ ಕರಾವಳಿ ಆಸ್ತಿ; ಇದರಲ್ಲಿ ಮಿಮಿಕ್ರಿ, ಸರ್ಕಸ್ ಬೇಡ’

Update: 2018-12-29 16:04 GMT

ಉಡುಪಿ, ಡಿ.29: ‘ಯಕ್ಷಗಾನವೆಂಬುದು ಕರಾವಳಿಯ ಆಸ್ತಿ. ಇದರಲ್ಲಿ ಮಿಮಿಕ್ರಿ, ಸರ್ಕಸ್‌ಗಳನ್ನು ಮಾಡಬೇಡಿ. ಭಾಷೆ, ಕಲೆ, ನಡವಳಿ ಹಾಗೂ ಸಂಸ್ಕೃತಿಯನ್ನು ನಾವೆಂದೂ ಮರೆಯಬಾರದು. ಇವುಗಳ ಹುಟ್ಟು ಆಸ್ತಿ. ಪ್ರತಿಯೊಬ್ಬರಿಗೂ ಮಾನವೀಯತೆಯಿಂದ ಬಾಳುವ ಅಗತ್ಯವಿದೆ. ಎಲ್ಲರಿಗೂ ನಮಸ್ಕಾರ’

ಇದು ಡಿ.15ರಂದು ಬದುಕಿನ 99 ವಸಂತಗಳನ್ನು ಪೂರೈಸಿ ನೂರನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಯಕ್ಷಗಾನದ ಮದ್ದಲೆ ಮಾಂತ್ರಿಕ ಎಂದೇ ಪ್ರಸಿದ್ಧರಾದ ಹಿರಿಯ ಯಕ್ಷಗಾನ ಕಲಾವಿದ ಹಾಗೂ ಇತ್ತೀಚೆಗೆ ರಾಜ್ಯೋತ್ಸವ ಪ್ರಶಸ್ತಿಯಿಂದ ಪುರಸ್ಕೃತರಾಗಿರುವ ಹಿರಿಯಡಕ ಗೋಪಾಲ ರಾಯರು ಆಡಿದ ಮಾತಿದು.

ಶತಮಾನದ ಹೊಸ್ತಿಲಲ್ಲಿರುವ ಗೋಪಾಲ ರಾಯರನ್ನು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಉಡುಪಿ, ಯಕ್ಷಗಾನ ಕೇಂದ್ರ ಇಂದ್ರಾಳಿ ಉಡುಪಿ, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ ಹಾಗೂ ಹಿರಿಯಡಕ ಸಂಸ್ಕೃತಿ ಸಿರಿ ಟ್ರಸ್ಟ್‌ಗಳು ಸಂಯುಕ್ತವಾಗಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಸನ್ಮಾನಿಸಿದ ಸಂದರ್ಭದಲ್ಲಿ ಆಡಿದ ಮಾತಿದು.

ನೂರರ ಹೊಸ್ತಿಲಲ್ಲಿ ನಿಂತಿದ್ದರೂ, ನಿಧಾನವಾಗಿ ಕೋಲನೂರಿ ನಡೆದುಕೊಂಡು, ಬೇರೆಯವರ ಸಹಾಯದಿಂದ ಮೆಟ್ಟಲುಗಳನ್ನು ಹತ್ತಿ ಬಂದ ಗೋಪಾಲರಾಯರು, ಎಲ್ಲರ ಮಾತುಗಳಿಗೆ ತಲೆದೂಗುತ್ತಾ, ಕೊನೆಗೆ ತಾನೇ ಸ್ಪಷ್ಟವಾದ ಉಚ್ಛಾರದೊಂದಿಗೆ ಕಂಚಿನ ಕಂಠದಲ್ಲಿ ತನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಯಕ್ಷಗಾನದ ಬಗ್ಗೆ ಮಾತನಾಡಲು ನನಗೆ ತುಂಬಾ ಇದೆ. ಇದು ನನ್ನ ಜೀವನದ ಆಸ್ತಿ. ತಂದೆ ಕೊಟ್ಟ ಬಳುವಳಿ. ನಾನೀಗ ಮದ್ದಲೆ ಬಾರಿಸಬೇಕಾ ಎನ್ನುತ್ತಾ ತನ್ನ ಪ್ರೀತಿಯ ಸಣ್ಣ ಮದ್ದಲೆಯನ್ನು ತರಿಸಿಕೊಂಡು ಸುಮಾರು 10ನಿಮಿಷಗಳ ಕಾಲ ಸುಶ್ರಾವ್ಯವಾಗಿ ಬಾರಿಸಿ ಸೇರಿದ ಅವರ ಅಭಿಮಾನಿಗಳು, ಯಕ್ಷಗಾನ ಪ್ರೇಮಿಗಳು ಮೂಗಿನ ಮೇಲೆ ಕೈ ಇರಿಸುವಂತೆ ಮಾಡಿದರು.

ಯಕ್ಷಗಾನದ ಮೇಲಿನ ಅಭಿಮಾನದಿಂದ ನಾನಿಲ್ಲಿಗೆ ಬಂದಿದ್ದೇನೆ. ನನ್ನನ್ನು ಗುರುತಿಸಿ ಸನ್ಮಾನಿಸುತ್ತಿರುವುದಕ್ಕೆ ಐದು ಸಂಸ್ಥೆಗಳಿಗೆ ಆಭಾರಿಯಾಗಿದ್ದೇನೆ. ನಾನಿಲ್ಲಿ ಭಾಷಣ ಮಾಡುತ್ತಿಲ್ಲ. ಮನೆಯಂಗಳದಲ್ಲಿ ಕುಳಿತು ಪಂಚಾಯಿತಿಗೆ ಮಾತು ಆಡುತಿದ್ದೇನೆ. ಈ ಚರ್ಮವಾದ್ಯ (ಮದ್ದಲೆ) ಬಾರಿಸುವುದನ್ನು ಕಲಿತು ಇನ್ನೂ ಮುಗಿದಿಲ್ಲ. ಈಗಲೂ ನಾನು ಪ್ರತಿದಿನ ಮನೆಯಲ್ಲಿ ಅಭ್ಯಾಸ ಮಾಡುತಿದ್ದೇನೆ .ಆದರೂ ನನ್ನ ಜೀವನದ ಸಾಧನೆಯನ್ನು ಒಪ್ಪಿಕೊಂಡ ಮಹನೀಯರಿಗೆ ಕೃತಜ್ಞತೆಗಳು ಎಂದು ನಕ್ಕರು.

ಇದಕ್ಕೆ ಮೊದಲು ಹಿರಿಯಡಕ ಗೋಪಾಲರಾಯರ ಕುರಿತು ‘ಮದ್ದಲೆ ಮಾಂತ್ರಿಕ’ ಕೃತಿಯನ್ನು ಬರೆದ ಯಕ್ಷಗಾನ ವಿದ್ವಾಂಸ ಡಾ.ಕೆ.ಎಂ.ರಾಘವ ನಂಬಿಯಾರ್, ಪ್ರೊ.ಎಂ.ಎಲ್.ಸಾಮಗ ಅವರು ಗುರು ಗೋಪಾಲರಾಯರ ಜೀವನ, ಸಾಧನೆಯ ಕುರಿತು ಮಾತನಾಡಿ ಅಭಿನಂದಿಸಿದರು.

ಗೋಪಾಲರಾಯರು ಗುರುಗಳಾಗಿ ಉನ್ನತ ಮಟ್ಟಕ್ಕೇರಿಸಿದ ಯಕ್ಷಗಾನ ಕೇಂದ್ರದ ಈಗಿನ ಗುರು ಬನ್ನಂಜೆ ಸುವರ್ಣ, 10-12 ವರ್ಷ ಪ್ರಾಯದ ವಿದ್ಯಾರ್ಥಿಗಳ ಮೂಲಕ ಹಿಮ್ಮೇಳ ಹಾಗೂ ಮುಮ್ಮೇಳದ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು. ಈ ಮೂಲಕ ಯಕ್ಷಗಾನ ಕೇಂದ್ರದ ಸಾಧನೆ ಕುರಿತು ಟೀಕೆ ಮಾಡುವ, ವ್ಯಂಗ್ಯ ಮಾಡುವವರಿಗೆ ಉತ್ತರ ನೀಡಿದರು.

ಗೋಪಾಲ ರಾಯರ ಕುರಿತು ಡಾ.ಕೆ.ಎಂ.ರಾಘವ ನಂಬಿಯಾರ್ ಅವರ ನೂತನ ಕೃತಿ ‘ರಂಗವಿದ್ಯೆಯ ಹೊಲಬು’ನ್ನು ಲೇಖಕ, ವಿಮರ್ಶಕ ಪ್ರೊ.ಮುರಳೀಧರ ಉಪಾಧ್ಯ ಬಿಡುಗಡೆಗೊಳಿಸಿದರು. ಅಕಾಡೆಮಿಯ ಆಡಳಿತಾಧಿಕಾರಿ ಡಾ.ಎಚ್. ಶಾಂತಾರಾಮ್ ಅಧ್ಯಕ್ಷತೆ ವಹಿಸಿದ್ದರು.

ಯಕ್ಷಗಾನ ಕೇಂದ್ರದ ಪ್ರಸಾದ್ ಮುದ್ರಾಡಿ ಭಾಗವತಿಕೆಯ ಮೂಲಕ ಸ್ವಾಗತ ಗೀತೆ ಹಾಡಿದರೆ, ಗೋವಿಂದ ಪೈ ಸಂಶೋಧನಾ ಕೇಂದ್ರದ ಸಂಯೋಜಕ ಪ್ರೊ. ವರದೇಶ ಹಿರೆಗಂಗೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರೊ.ಎಂ. ಎಲ್.ಸಾಮಗ ವಂದಿಸಿ, ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News