×
Ad

​ಪಂಚತಾರಾ ಹೋಟೆಲ್ ನಲ್ಲಿ ವಿದೇಶಿ ಮಹಿಳೆಯ ಅತ್ಯಾಚಾರ

Update: 2018-12-30 09:34 IST

ಚಂಡೀಗಢ, ಡಿ. 30: ಇಲ್ಲಿನ ಐಟಿ ಪಾರ್ಕ್‌ನಲ್ಲಿರುವ ಪಂಚತಾರಾ ಹೋಟೆಲ್‌ನ ಸ್ಪಾ ಗೆ ತೆರಳಿದ್ದ 54 ವರ್ಷದ ಬ್ರಿಟಿಷ್ ಮಹಿಳೆಯ ಮೇಲೆ ಸ್ಪಾ ಮಸಾಜುಗಾರ ಅತ್ಯಾಚಾರ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ.

ಹೋಟೆಲ್ ಸ್ಪಾದಲ್ಲಿ ಮಸಾಜ್ ಮಾಡುತ್ತಿದ್ದ 28ರ ವ್ಯಕ್ತಿ ಈ ಕೃತ್ಯ ಎಸಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ತಲೆ ಮರೆಸಿಕೊಂಡಿದ್ದು, ಈತ ಮೂಲತಃ ಉತ್ತರ ಪ್ರದೇಶದ ಬಿಜ್‌ನೋರ್‌ನ ವ್ಯಕ್ತಿ.

ಡಿಸೆಂಬರ್ 19ರಂದು ಪ್ರವಾಸಿ ವೀಸಾ ಮೇಲೆ ತನ್ನ ಪತಿ ಜತೆ ಚಂಡೀಗಢಕ್ಕೆ ಆಗಮಿಸಿದ್ದ ಮಹಿಳೆ ಈ ಹೋಟೆಲ್‌ನಲ್ಲಿ ತಂಗಿದ್ದರು. 20ರಂದು ಫೂಟ್ ಸ್ಪಾಗೆ ತೆರಳಿದ್ದಾಗ, ಮಸಾಜ್ ಮಾಡುತ್ತಿದ್ದ ವ್ಯಕ್ತಿ ಆಕೆಯ ಜತೆ ಅಸಭ್ಯವಾಗಿ ವರ್ತಿಸಿದ್ದಾನೆ. ಪತಿಗೆ ಮಸಾಜ್ ಪೂರೈಸಿದ ಬಳಿಕ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಘಟನೆ ಬಗ್ಗೆ ಹೋಟೆಲ್ ಸಿಬ್ಬಂದಿಗೆ ಅದೇ ದಿನ ದೂರು ನೀಡಿದ್ದರು. ಆದರೆ ಶಿಮ್ಲಾ ಪ್ರವಾಸ ಮುಗಿಸಿ ಬಂದ ಬಳಿಕ ಪೊಲೀಸರಿಗೆ ಡಿ. 27ರಂದು ದೂರು ನೀಡಿದ್ದರು. ಆರಂಭದಲ್ಲಿ ಮಹಿಳೆ ಪೊಲೀಸರಿಗೆ ದೂರು ನೀಡುವ ಬಗ್ಗೆ ನಿರ್ಧಾರಕ್ಕೆ ಬಂದಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಭಾರತದ ಸಂಪ್ರದಾಯಗಳ ಬಗ್ಗೆ ಅಧ್ಯಯನ ಮಾಡುವ ಸಲುವಾಗಿ ಮಹಿಳೆ ಇಲ್ಲಿಗೆ ಆಗಮಿಸಿದ್ದರು. ಹೋಟೆಲ್ ಸಿಬ್ಬಂದಿ ಆರೋಪಿಯನ್ನು ಅದೇ ದಿನ ಕೆಲಸದಿಂದ ವಜಾ ಮಾಡಿದ್ದಾರೆ. ಆದರೆ ಪೊಲೀಸರು ಸಂಪರ್ಕಿಸಿದಾಗ ಘಟನೆ ಬಗ್ಗೆ ಬಾಯಿ ಬಿಟ್ಟಿಲ್ಲ ಎಂದು ಹೇಳಲಾಗಿದೆ. ಆರೋಪಿಯ ಪತ್ತೆಗೆ ಜಾಲ ಹೆಣೆಯಲಾಗಿದ್ದು, ದೂರುದಾರ ಮಹಿಳೆಯನ್ನು ವೈದ್ಯಕೀಯ ತಪಾಸಣೆಗೆ ಗುರಿಪಡಿಸಲಾಗಿದೆ ಎಂದು ಹಿರಿಯ ಅಧೀಕ್ಷಕಿ ನೀಲಾಂಬರಿ ಜಗದಾಳೆ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News