ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ಅಪೂರ್ಣ: ಡಿವೈಎಫ್‌ಐಯಿಂದ ಅಣಕು ಉದ್ಘಾಟನೆಯ ಪ್ರತಿಭಟನೆ

Update: 2018-12-30 08:53 GMT

ಮಂಗಳೂರು, ಡಿ.30: ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿಯನ್ನು ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳಿಸುವುದಾಗಿ ಸ್ಥಳೀಯ ಸಂಸದರು ಭರವಸೆ ನೀಡಿದ್ದರೂ ಕಾಮಗಾರಿ ಇನ್ನೂ ಅಪೂರ್ಣವಾಗಿದೆ ಎಂದು ಆರೋಪಿಸಿ ಡಿವೈಎಫ್‌ಐ ಉಳ್ಳಾಲ ಘಟಕದ ನೇತೃತ್ವದಲ್ಲಿ ಅಣಕು ಉದ್ಘಾಟನಾ ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್‌ರವರ ಮುಖವಾಡ ಧರಿಸಿದವರೊಂದಿಗೆ ಮೆರವಣಿಗೆ ನಡೆಸಿ ಉದ್ಘಾಟನೆಯ ಅಣಕು ಪ್ರದರ್ಶನ ನಡೆಸಿದರು.

ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, ಅಚ್ಚೇ ದಿನ್ ನೀಡುವುದಾಗಿ ಹೇಳಿ ಅಧಿಕಾರದ ಬಂದ ಪ್ರಧಾನಿ ನರೇಂದ್ರ ಮೋದಿ ಸರಕಾರಕ್ಕೆ ಉತ್ತಮ ರಸ್ತೆಯನ್ನು ನೀಡಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.

ಸ್ಥಳೀಯ ಸಂಸದರು ಆಡಿರುವ ಮಾತನ್ನು ತಪ್ಪಿರುವುದಕ್ಕೆ ಮತ್ತು ಅವರು ಆಡುತ್ತಿರುವ ಸುಳ್ಳಿನ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ಈ ಪ್ರತಿಭಟನೆ ನಡೆಸಿರುವುದಾಗಿ ಅವರು ಹೇಳಿದರು.

ಸಿಪಿಎಂ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲಿಯಾನ್, ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ್, ಗಡಿನಾಡು ರಕ್ಷಣಾ ವೇದಿಕೆಯ ಅಧ್ಯಕ್ಷ ಸಿದ್ದೀಕ ತಲಪಾಡಿ ಮಾತನಾಡಿದರು.

ಕೋಟೆಕಾರು ಬೀಡಿ ಯೂನಿಯನ್ ಅಧ್ಯಕ್ಷೆ ಪದ್ಮಾವತಿ ಎಂ. ಶೆಟ್ಟಿ, ಕಾರ್ಮಿಕ ನಾಯಕ ಜಯಂತ್ ನಾಯ್ಕಿ, ಮಹಾಬಲ ದೆಪ್ಪಲಿಮಾರ್, ಡಿವೈಎಫ್‌ಐ ಮುಖಂಡರಾದ ರಝಾಕ್ ಮೊಂಟೆಪದವು, ಸುನಿಲ್ ತೆವುಲ, ಅಶ್ರಫ್ ಕೆಸಿರೋಡು, ಹನೀಫ್ ಹರೇಕಳ, ಅಶ್ರಫ್ ಹರೇಕಳ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News