ಕರ್ನಾಟಕ ಸರಕಾರ ಕೇವಲ 800 ರೈತರ ಸಾಲಮನ್ನಾ ಮಾಡಿದೆ ಎಂದು ಸುಳ್ಳು ಹೇಳಿದ ಪ್ರಧಾನಿ ಮೋದಿ

Update: 2018-12-30 08:11 GMT

ಹೊಸದಿಲ್ಲಿ, ಡಿ.30: ಶನಿವಾರ ಗಾಝಿಪುರದಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ಕರ್ನಾಟಕದ ಸಮ್ಮಿಶ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಕರ್ನಾಟಕ ಸರಕಾರ ಲಕ್ಷಾಂತರ ರೈತರಿಗೆ ಸಾಲಮನ್ನಾ ಆಶ್ವಾಸನೆ ನೀಡಿ, ಕೇವಲ 800 ರೈತರಿಗಷ್ಟೇ ಇದರ ಪ್ರಯೋಜನವಾಗಿದೆ ಎಂದು ಹೇಳಿದ್ದರು.

ಕಳೆದ ಜುಲೈನಲ್ಲಿ ಕರ್ನಾಟಕದ ಸಿಎಂ ಎಚ್.ಡಿ.ಕುಮಾರಸ್ವಾಮಿಯವರು ಷರತ್ತುಬದ್ಧ ಕೃಷಿ ಸಾಲಮನ್ನಾ ಘೋಷಿಸಿದ್ದರು. ಇದಕ್ಕಾಗಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್‍ನಲ್ಲಿ 34,000 ಕೋಟಿ ರೂಪಾಯಿ ನಿಗದಿಪಡಿಸಿದ್ದರು. ಬಳಿಕ ಸರ್ಕಾರ 2018ರ ಜುಲೈ 1ರವರೆಗೆ ಸಹಕಾರ ಬ್ಯಾಂಕ್ ‍ಗಳಿಂದ ಪಡೆದ ಒಂದು ಲಕ್ಷ ರೂಪಾಯಿವರೆಗಿನ ಎಲ್ಲ ಸಾಲ ಮನ್ನಾ ಮಾಡಲು ನಿರ್ಧರಿಸಿದ್ದರಿಂದ ಈ ಮೊತ್ತ 44 ಸಾವಿರ ಕೋಟಿ ರೂ. ತಲುಪಿತು.

ಸುಳ್ಳು ಹೇಳಿಕೆ

ಕೇವಲ 800 ಮಂದಿಗಷ್ಟೇ ಸಾಲಮನ್ನಾ ಪ್ರಯೋಜನ ಸಿಕ್ಕಿದೆ ಎಂಬ ಮೋದಿ ಹೇಳಿಕೆ ಅಪ್ರಸ್ತುತ. ಇದರ ಮೂಲ, ಟೈಮ್ಸ್ ಆಫ್ ಇಂಡಿಯಾದ ಡಿಸೆಂಬರ್ 13ರ ಸಂಚಿಕೆಯಲ್ಲಿ ಪ್ರಕಟವಾದ ವರದಿ. ಕರ್ನಾಟಕ ಸರ್ಕಾರ ಕೃಷಿ ಸಾಲಮನ್ನಾ ಯೋಜನೆಯಡಿ ನಿಗದಿಪಡಿಸಿದ್ದ 44 ಸಾವಿರ ಕೋಟಿ ರೂಪಾಯಿಗಳನ್ನು 800 ರೈತರಿಗೆ ವಿತರಿಸಿದೆ ಎಂದು ಈ ವರದಿಯಲ್ಲಿ ಹೇಳಲಾಗಿತ್ತು. ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ವಿಧಾನಸಭೆಗೆ ನೀಡಿದ ಮಾಹಿತಿಯಲ್ಲಿ, ಸಿಎಂ ಜುಲೈ 5ರಂದು ಘೋಷಿಸಿದ ಯೋಜನೆಯಡಿ 800 ರೈತರು ಸೌಲಭ್ಯ ಪಡೆದಿದ್ದಾರೆ ಎಂದು ವಿವರಿಸಿದ್ದಾಗಿ ವರದಿ ಉಲ್ಲೇಖಿಸಿತ್ತು.

ಆ ಬಳಿಕ ಹಲವು ವರದಿಗಳು ಸರ್ಕಾರದ ಸಾಲಮನ್ನಾ ಸೌಲಭ್ಯ ಹಲವು ರೈತರಿಗೆ ತಲುಪಿದ್ದನ್ನು ವರದಿ ಮಾಡಿದ್ದವು. ಎನ್ ಡಿಟಿವಿ ಡಿಸೆಂಬರ್ 19ರಂದು ನಡೆಸಿದ ರಿಯಾಲಿಟಿ ಚೆಕ್ ನಲ್ಲಿ ಈಗಾಗಲೇ ರಾಜ್ಯದಲ್ಲಿ ಸುಮಾರು 27 ಸಾವಿರ ರೈತರು ಸಹಕಾರ ಬ್ಯಾಂಕ್ ಗಳಿಂದ ಸಾಲ ಮನ್ನಾ ಪ್ರಮಾಣಪತ್ರ ಪಡೆದಿದ್ದು, ಒಟ್ಟು 150 ಕೋಟಿ ರೂಪಾಯಿ ಸೌಲಭ್ಯ ಪಡೆದಿದ್ದಾರೆ ಎಂದು ಹೇಳಲಾಗಿತ್ತು. ಪ್ರತಿ ಕುಟುಂಬದ ಗರಿಷ್ಠ ಮನ್ನಾ ಮಿತಿ 2 ಲಕ್ಷ ಎಂದು ನಿಗದಿಪಡಿಸಿದ್ದರೂ, ಮೊದಲ ಹಂತದಲ್ಲಿ 50 ಸಾವಿರ ಸಾಲ ಮನ್ನಾ ಮಾಡಲಾಗುತ್ತಿದೆ.

ಡಿಸೆಂಬರ್ 27ರಂದು 'ದ ಮಿಂಟ್' ಈ ವರದಿಯನ್ನು ಪರಿಷ್ಕರಿಸಿ, 70 ಸಾವಿರ ರೈತರು ಕರ್ನಾಟಕದಲ್ಲಿ 348 ಕೋಟಿ ರೂಪಾಯಿ ಸಾಲ ಮನ್ನಾ ಸೌಲಭ್ಯ ಪಡೆದಿದ್ದಾರೆ ಎಂದು ಹೇಳಿತ್ತು.

ಕರ್ನಾಟಕದ ಸಾಲ ಮನ್ನಾ ಕುರಿತ ಇತ್ತೀಚಿನ ವರದಿಗಳನ್ನು ಮುಚ್ಚಿಟ್ಟು ಹಳೆಯ ವರದಿಯನ್ನು ಉಲ್ಲೇಖಿಸಿ ಮೋದಿ ಕೇವಲ 800 ರೈತರಿಗೆ ಪ್ರಯೋಜನ ಸಿಕ್ಕಿದೆ ಎಂದು ಮೋದಿ ಸುಳ್ಳು ಹೇಳಿದ್ದಾರೆ.

ಕೃಪೆ: altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News