ಉ. ಪ್ರದೇಶದಲ್ಲಿ ಪೊಲೀಸರಿಗೆ ತಮ್ಮನ್ನೇ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ: ಮೃತ ಪೊಲೀಸ್ ಪೇದೆಯ ಪುತ್ರ

Update: 2018-12-30 09:20 GMT

ಲಕ್ನೋ, ಡಿ.30: ಉತ್ತರ ಪ್ರದೇಶದ ಗಾಝಿಪುರದಲ್ಲಿ ನಡೆದ ಕಲ್ಲುತೂರಾಟದಲ್ಲಿ ಪೊಲೀಸ್ ಪೇದೆಯೊಬ್ಬರು ಜೀವ ಕಳೆದುಕೊಂಡಿದ್ದಾರೆ. ಘಟನೆ ಹಿನ್ನೆಲೆಯಲ್ಲಿ "ತಮ್ಮನ್ನೇ ರಕ್ಷಿಸಿಕೊಳ್ಳಲಾಗದ ಪೊಲೀಸರಿಂದ ಮತ್ತೇನನ್ನು ನಿರೀಕ್ಷಿಸಬಹುದು" ಎಂಬ ಟೀಕೆಗಳು ಕೇಳಿಬಂದಿವೆ.

ಪ್ರಧಾನಿ ನರೇಂದ್ರ ಮೋದಿಯವರ ರ್ಯಾಲಿಯ ಭದ್ರತಾ ಕರ್ತವ್ಯದಿಂದ ಸುರೇಶ್ ವತ್ಸ ಎಂಬ ಪೇದೆ ವಾಪಸ್ಸಾಗುತ್ತಿದ್ದಾಗ, ಕಲ್ಲುತೂರಾಟ ನಡೆದಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದಾಳಿ ಮಾಡಿದವರನ್ನು ನಿಶಾದ್ ಪಾರ್ಟಿಯ ಸದಸ್ಯರು ಎಂದು ಪೊಲೀಸರು ಗುರುತಿಸಿದ್ದಾರೆ. ಈ ಸಂಘಟನೆ ತಮ್ಮ ಸಮುದಾಯಕ್ಕೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಹೆಚ್ಚಿನ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿತ್ತು.

ಹಿಂಸಾಚಾರಕ್ಕೆ ಸಂಬಂಧಿಸಿದಂತೆ 13 ಮಂದಿಯನ್ನು ಬಂಧಿಸಿರುವ ಪೊಲೀಸರು ಇತರ ಹಲವು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. 100 ಮಂದಿ ಅಪರಿಚಿತರು ಸೇರಿದಂತೆ 132 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ಪೇದೆಯ ಪತ್ನಿಗೆ 40 ಲಕ್ಷ ಹಾಗೂ ಪೋಷಕರಿಗೆ 10 ಲಕ್ಷ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿ ಆದಿತ್ಯನಾಥ್ ಘೋಷಿಸಿದ್ದಾರೆ.

"ಪೊಲೀಸರಿಗೆ ತಮ್ಮನ್ನೇ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರಿಂದ ಏನನ್ನು ನಿರೀಕ್ಷಿಸಬಹುದು?, ಪರಿಹಾರದಿಂದ ಈಗ ಏನು ಮಾಡಲು ಸಾಧ್ಯ? ಈ ಹಿಂದೆಯೂ ಬುಲಂದರ್‍ ಶಹರ್ ‍ನಲ್ಲಿ ಇಂಥದ್ದೇ ಘಟನೆ ನಡೆದಿತ್ತು" ಎಂದು ಸುರೇಶ್ ವತ್ಸ ಅವರ ಮಗ ವಿ.ಪಿ.ಸಿಂಗ್ ಹೇಳಿದ್ದಾರೆ.

ಕಳೆದ ಒಂದು ತಿಂಗಳಲ್ಲಿ ಗುಂಪು ಘರ್ಷಣೆಯಲ್ಲಿ ಪೊಲೀಸ್ ಮೃತಪಟ್ಟ ಎರಡನೇ ಘಟನೆ ಇದಾಗಿದೆ. ಡಿಸೆಂಬರ್ 3ರಂದು ಬುಲಂದರ್ ‍ಶಹರ್ ‍ನಲ್ಲಿ ನಡೆದ ಹಿಂಸಾಚಾರದಲ್ಲಿ ಇನ್ ಸ್ಪೆಕ್ಟರ್ ಸುಭೋದ್ ಕುಮಾರ್ ಸಿಂಗ್ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News