ಜಯಲಲಿತಾ ಚಿಕಿತ್ಸೆಯಲ್ಲಿ ಆರೋಗ್ಯ ಕಾರ್ಯದರ್ಶಿ, ಅಪೋಲೊ ಆಸ್ಪತ್ರೆಯ ಒಳಸಂಚು: ವಕೀಲರಿಂದ ಗಂಭೀರ ಆರೋಪ

Update: 2018-12-30 15:23 GMT

ಚೆನ್ನೈ, ಡಿ. 30: ದಿವಂಗದ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಚಿಕಿತ್ಸೆ ನೀಡುವಲ್ಲಿ ತಮಿಳುನಾಡಿನ ಆರೋಗ್ಯ ಕಾರ್ಯದರ್ಶಿ ಜೆ. ರಾಧಾಕೃಷ್ಣನ್ ಹಾಗೂ ಅಪೋಲೊ ಆಸ್ಪತ್ರೆ ಒಳಸಂಚು ನಡೆಸಿದೆ ಹಾಗೂ ಮಾಜಿ ಕಾರ್ಯದರ್ಶಿ ರಾಮ ಮೋಹನ ರಾವ್ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಜಯಲಲಿತಾ ಸಾವಿನ ಸಂದರ್ಭದ ಕುರಿತು ತನಿಖೆ ನಡೆಸುತ್ತಿರುವ ಸಮಿತಿಯ ವಕೀಲರು ಆರೋಪಿಸಿದ್ದಾರೆ.

 ಜಯಲಲಿತಾ ಅವರಿಗೆ ಅಪೋಲೊ ಆಸ್ಪತ್ರೆ ಸೂಕ್ತ ಚಿಕಿತ್ಸೆ ನೀಡಿಲ್ಲ ಎಂದು ತಿಳಿಸಲು ಕಾರ್ಡಿಯೊಥೋರಾಸಿಕ್ ಸರ್ಜನ್ ನೀಡಿರುವ ಹೇಳಿಕೆಯನ್ನು ಅವರು ಉಲ್ಲೇಖಿಸಿದ್ದಾರೆ. ಆದರೆ, ಇದನ್ನು ಸರ್ಜನ್ ವಿರೋಧಿಸಿದ್ದು, ಈ ನಿರ್ದಿಷ್ಟ ಹೇಳಿಕೆಯನ್ನು ತಪ್ಪಾಗಿ ದಾಖಲಿಸಲಾಗಿದೆ ಎಂದು ನವೆಂಬರ್ 29ರಂದು ಹೇಳಿದ್ದರು ಆದರೆ, ವಕೀಲರು ಅವರ ಹೇಳಿಕೆಯನ್ನು ನಿರ್ಲಕ್ಷಿಸಿದ್ದರು.

ವಕೀಲ ಮುಹಮ್ಮದ್ ಝಫರುಲ್ಲಾ ಖಾನ್ ನ್ಯಾಯಮೂರ್ತಿ (ನಿವೃತ್ತ) ಎ. ಅರ್ಮುಗಸ್ವಾಮಿ ಆಯೋಗದ ಮುಂದೆ ಗುರುವಾರ ಈ ದೂರು ನೀಡಿದ್ದಾರೆ. ರಾಧಾಕೃಷ್ಣನ್ ಹಾಗೂ ರಾವ್ ಅವರಿಗೆ ನೋಟಿಸು ಜಾರಿ ಮಾಡುವಂತೆ ಖಾನ್ ಅವರು ಆಗ್ರಹಿಸಿದ್ದಾರೆ.

 ಸಮಿತಿಯ ಆರೋಪವನ್ನು ಅಪೋಲೊ ಆಸ್ಪತ್ರೆ ತೀವ್ರವಾಗಿ ವಿರೋಧಿಸಿದೆ. ಜಯಲಲಿತಾ ಅವರಿಗೆ ಗಂಭೀರ ಅನಾರೋಗ್ಯ ಇರುವುದು ಹಾಗೂ ಅಪೋಲೊ ಆಸ್ಪತ್ರೆ ನೀಡುತ್ತಿರುವ ಚಿಕಿತ್ಸೆ ಬಗ್ಗೆ ಅವರಿಗೆ ಅರಿವಿತ್ತು. ಆದರೂ ಅವರು ಸಂಪುಟ ಸಚಿವರಿಗೆ ಯಾವುದೇ ವರದಿ ಕಳುಹಿಸಿರಲಿಲ್ಲ ಎಂದು ಖಾನ್ ದೂರಿಲ್ಲಿ ಹೇಳಿದ್ದಾರೆ.

ಆರೋಗ್ಯ ಕಾರ್ಯದರ್ಶಿ ಅವರು ಆಸ್ಪತ್ರೆಯ ವಕ್ತಾರನಂತೆ ವರ್ತಿಸಿದರು ಎಂದು ಮುಹಮ್ಮದ್ ಝಫರುಲ್ಲಾ ಖಾನ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News