ಶಂಕಿತ ನಕ್ಸಲರಿಂದ ಬಿಜೆಪಿ ಶಾಸಕನ ಸಂಬಂಧಿಯ ಹತ್ಯೆ

Update: 2018-12-30 15:57 GMT

ಔರಂಗಾಬಾದ್, ಡಿ.30: ಬಿಹಾರದ ಔರಂಗಾಬಾದ್ ಜಿಲ್ಲೆಯ ಸುದಿ ಬಿಗಹಾ ಗ್ರಾಮದಲ್ಲಿ ಶನಿವಾರ ರಾತ್ರಿ ಶಂಕಿತ ನಕ್ಸಲರು ಓರ್ವ ವ್ಯಕ್ತಿಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದು,10 ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

ನರೇಂದ್ರ ಸಿಂಗ್(55) ಕೊಲೆಯಾಗಿರುವ ವ್ಯಕ್ತಿಯಾಗಿದ್ದು,ಅವರು ಬಿಜೆಪಿ ಶಾಸಕ ರಾಜನ್ ಕುಮಾರ ಸಿಂಗ್ ಅವರ ಚಿಕ್ಕಪ್ಪ ಎಂದು ಎಸ್‌ಪಿ ಸತ್ಯಪ್ರಕಾಶ್ ಅವರು ಸುದ್ದಿಗಾರರಿಗೆ ತಿಳಿಸಿದರು.

ದೇವ ಪೊಲೀಸ್ ಠಾಣೆಯಲ್ಲಿ ದಫೇದಾರ್ ಆಗಿರುವ ಧನಂಜಯ ಸಿಂಗ್ ಅವರ ಮನೆಗೂ ನಕ್ಸಲರು ಬೆಂಕಿ ಹಚ್ಚಿದ್ದಾರೆ ಎಂದರು. ಸಮೀಪದಲ್ಲಿಯೇ ಬೀಡು ಬಿಟ್ಟಿದ್ದ ಸಿಆರ್‌ಪಿಎಫ್ ಪಡೆಯು ಪೊಲೀಸ್ ಅಧಿಕಾರಿಗಳೊಂದಿಗೆ ರಾತ್ರಿ ಹತ್ತು ಗಂಟೆಯ ಸುಮಾರಿಗೆ ಸ್ಥಳವನ್ನು ತಲುಪಿ ನಕ್ಸಲರೊಂದಿಗೆ ಗುಂಡಿನ ಕಾಳಗ ನಡೆಸಿದ್ದು,ಈ ವೇಳೆ ನಕ್ಸಲರು ಅಲ್ಲಿಂದ ಪರಾರಿಯಾಗಿದ್ದಾರೆ. ಗುಂಡಿನ ಚಕಮಕಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ.

ಪ್ರದೇಶದಲ್ಲಿ ರಾಜನ್ ಕುಮಾರ ಸಿಂಗ್ ಅವರು ನಡೆಸುತ್ತಿರುವ ಗುತ್ತಿಗೆ ವ್ಯವಹಾರ ನಕ್ಸಲರ ಗುರಿಯಾಗಿತ್ತು ಮತ್ತು ನಕ್ಸಲ್ ಕಮಾಂಡರ್‌ಗಳಾದ ಸಂದೀಪ್ ಯಾದವ್,ವಿವೇಕ್ ಯಾದವ್ ಮತ್ತು ಸಂಜಿತ್ ಯಾದವ ಅವರು 25-30 ಗೆರಿಲ್ಲಾಗಳೊಂದಿಗೆ ಈ ದಾಳಿಯನ್ನು ನಡೆಸಿದ್ದರು. ಇತ್ತೀಚಿಗೆ ಕೆಲವು ಹಿರಿಯ ನಕ್ಸಲ್ ನಾಯಕರ ಬಂಧನ ಮತ್ತು ಸಂದೀಪ ಯಾದವನ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಜಾರಿ ನಿರ್ದೇಶನಾಲಯದ ನಿರ್ಧಾರ ಈ ದಾಳಿಗೆ ಕಾರಣಗಳಾಗಿರಬಹುದು ಎಂದು ಸತ್ಯಪ್ರಕಾಶ ಹೇಳಿದರು.

ಶಂಕಿತ ನಕ್ಸಲರು ಮಾರ್ಚ್,2013ರಲ್ಲಿ ರಾಜನ್ ಕುಮಾರ ಸಿಂಗ್ ಅವರ ಸೋದರ ಸಂಬಂಧಿ ಅಜಿತ ಕುಮಾರ ಸಿಂಗ್ ಅವರನ್ನು ಹತ್ಯೆಗೈದಿದ್ದರು ಎಂದು ಪೊಲೀಸರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News