ಮೀನಿನಲ್ಲಿ ಫಾರ್ಮಾಲಿನ್ ಪತ್ತೆಯಾದ ಬಳಿಕ ಗೋವಾ ಸರಕಾರದಿಂದ ಕಿರುಕುಳ: ಮಹಿಳಾ ಎಫ್‌ಡಿಎ ಅಧಿಕಾರಿಯ ಆರೋಪ
Update: 2018-12-30 21:32 IST
ಪಣಜಿ,ಡಿ.30: ರಾಜ್ಯಕ್ಕೆ ಆಮದಾಗುತ್ತಿದ್ದ ಮೀನುಗಳಲ್ಲಿ ಫಾರ್ಮಾಲಿನ್ ಅನ್ನು ತನ್ನ ಪರೀಕ್ಷೆಗಳು ದೃಢಪಡಿಸಿದ ಬಳಿಕ ರಾಜ್ಯ ಸರಕಾರವು ತನಗೆ ಕಿರುಕುಳ ನೀಡುತ್ತಿದೆ ಎಂದು ಗೋವಾದ ಆಹಾರ ಮತ್ತು ಔಷಧಿಗಳ ಆಡಳಿತ(ಎಫ್‌ಡಿಎ)ಇಲಾಖೆಯ ಮಹಿಳಾ ಅಧಿಕಾರಿಯೋರ್ವರು ಆರೋಪಿಸಿದ್ದಾರೆ.
ಕಳೆದ ವಾರ ಗೋವಾ ಮಾನವ ಹಕ್ಕುಗಳ ಆಯೋಗ(ಜಿಎಚ್‌ಆರ್‌ಸಿ)ಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಇವಾ ಫೆರ್ನಾಂಡಿಸ್ ಈ ಆರೋಪವನ್ನು ಮಾಡಿದ್ದಾರೆ. ಹಿರಿಯ ಎಫ್‌ಡಿಎ ಅಧಿಕಾರಿಗಳು ಮೀನು ವ್ಯಾಪಾರಿಗಳೊಂದಿಗೆ ನಂಟು ಹೊಂದಿದ್ದಾರೆ ಎಂದೂ ಆರೋಪಿಸಿರುವ ಅವರು,ಇದನ್ನು ದೃಢೀಕರಿಸಲು ಈ ಅಧಿಕಾರಿಗಳ ಫೋನ್ ದಾಖಲೆಗಳನ್ನು ಪರಿಶೀಲಿಸುವಂತೆ ಆಗ್ರಹಿಸಿದ್ದಾರೆ.
ಫೆರ್ನಾಂಡಿಸ್ ಜುಲೈ 12ರಂದು ಮಡಗಾಂವ್ ಸಗಟು ಮೀನು ಮಾರುಕಟ್ಟೆಯಲ್ಲಿ ಮೀನುಗಳನ್ನು ಪರೀಕ್ಷೆಗೊಳಪಡಿಸಿ ಅವುಗಳಲ್ಲಿ ಫಾರ್ಮಾಲಿನ್ ಅಂಶವಿರುವುದನ್ನು ದೃಢಪಡಿಸಿದ್ದ ಎಫ್‌ಡಿಎ ತಂಡದಲ್ಲಿದ್ದರು.