ಟೆಹರಾನ್‌ನಲ್ಲಿ ಬೃಹತ್ ವಿದ್ಯಾರ್ಥಿ ಪ್ರತಿಭಟನೆ

Update: 2018-12-30 18:02 GMT

ಟೆಹರಾನ್, ಡಿ.30: ಹತ್ತು ಮಂದಿಯನ್ನು ಬಲಿತೆಗೆದುಕೊಂಡ ಬಸ್ ಅಪಘಾತ ಘಟನೆಯ ಹೊಣೆಯನ್ನು ಹೊತ್ತುಕೊಂಡು ವಿಶ್ವವಿದ್ಯಾನಿಲಯದ ಅಧಿಕಾರಿಗಳು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ, ಇರಾನ್‌ನ ಸಾವಿರಾರು ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯು ರವಿವಾರ ಎರಡನೆ ದಿನಕ್ಕೆ ಕಾಲಿಟ್ಟಿದೆ.

ಮಂಗಳವಾರ ಟೆಹರಾನ್‌ನ ಇಸ್ಲಾಮಿಕ್ ಆಝಾದ್ ವಿಶ್ವವಿದ್ಯಾನಿಲಯದ ಚೌಕದಲ್ಲಿ ಸಂಭವಿಸಿದ ಬಸ್ ದುರಂತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಭಾವಚಿತ್ರಗಳನ್ನು ಹಿಡಿದ ನೂರಾರು ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು.

ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಲಿ-ಅಕ್ಬರ್ ವಿಲಾಯಿತಿ ರಾಜೀನಾಮೆ ನೀಡಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆಂದು ಕ್ರೀಡಾ ಹಾಗೂ ಯುವಜನ ಸಚಿವಾಲಯ ಇಲಾಖೆಯ ಸುದ್ದಿಸಂಸ್ಥೆ ಬೊರ್ನಾ ವರದಿ ಮಾಡಿದೆ.

  ವಾಯುವ್ಯ ಟೆಹರಾನ್‌ನ ವಿವಿಯ ವಿಜ್ಞಾನ ಹಾಗೂ ಸಂಶೋಧನಾ ಕ್ಯಾಂಪಸ್‌ಗೆ ದುರ್ಗಮವಾದ ಪರ್ವತಮಯವಾದ ರಸ್ತೆಯಲ್ಲಿ 30 ಮಂದಿ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಬಸ್ , ರಸ್ತೆ ಜಾರಿ ಪಕ್ಕದ ಕಾಂಕ್ರೀಟ್ ತಡೆಬೇಲಿಗೆ ಢಿಕ್ಕಿ ಹೊಡೆದಿದ್ದರಿಂದ 10 ಮಂದಿ ಮೃತಪಟ್ಟಿದ್ದರು.

ವಿಶ್ವವಿದ್ಯಾನಿಲಯದ ಒಡೆತನದ ಬಸ್ ಅತ್ಯಂತ ಹಳೆಯದ್ದಾಗಿತ್ತು ಹಾಗೂ ಅದನ್ನು ಅತ್ಯಂತ ಕಳಪೆಯಾಗಿ ನಿರ್ವಹಣೆ ಮಾಡಲಾಗುತ್ತಿತ್ತು ಎಂದು ವಿದ್ಯಾರ್ಥಿ ನಾಯಕರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News