×
Ad

ಪುತ್ತೂರು: ರೆಸಾರ್ಟ್ ಈಜುಕೊಳಕ್ಕಿಳಿದು ಅಪಾಯಕ್ಕೆ ಸಿಲುಕಿದ ಬಾಲಕ

Update: 2018-12-31 11:03 IST

ಪುತ್ತೂರು, ಡಿ.31: ರೆಸಾರ್ಟ್‌ನ ಈಜುಕೊಳಕ್ಕೆ ಇಳಿದು ಬಾಲಕನೋರ್ವ ಅಪಾಯಕ್ಕೆ ಸಿಲುಕಿದ ಘಟನೆ ಕುಂಬ್ರ ಸಮೀಪದ ಪರ್ಲಡ್ಕ ಎಂಬಲ್ಲಿ ನಾಲ್ಕು ದಿನಗಳ ಹಿಂದೆ ಸಂಭವಿಸಿದೆ. ಕೂಡಲೇ ಸ್ಥಳದಲ್ಲಿದ್ದವರು ಬಾಲಕನನ್ನು ರಕ್ಷಿಸಿದ್ದಾರೆ. ಇಡೀ ಘಟನೆಯ ಸಿಸಿಟಿವಿ ದೃಶ್ಯಾವಳಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪರ್ಲಡ್ಕ ಬೀಗ್ರೋಸ್ ಎಂಬ ರೆಸಾಟರ್‌ನ ಈಜುಕೊಳದಲ್ಲಿ ಡಿ.26ರಂದು ಸಂಜೆ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಅಂದು ಮಧ್ಯಾಹ್ನ ರೆಸಾರ್ಟ್‌ನಲ್ಲಿ ಪುತ್ತೂರಿನ ಸಾಲ್ಮರದ ಕುಟುಂಬವೊಂದರ ಕಾರ್ಯಕ್ರಮ ನಡೆದಿತ್ತು. ಇದರಲ್ಲಿ ಪಾಲ್ಗೊಂಡಿದ್ದ ಹಲವರು ತೆರಳಿದ್ದರು. ಈ ರೀತಿ ಬಂದವರಲ್ಲಿ ಸಂಜೆ 5 ಗಂಟೆ ಸುಮಾರಿಗೆ ಪೋಷಕರೊಂದಿಗಿದ್ದ ಐವರು ಬಾಲಕರು ಈಜುಕೊಳಕ್ಕೆ ಇಳಿದಿದ್ದಾರೆ.

ಇದೇವೇಳೆ ಈಜು ಬಾರದ 8 ವರ್ಷದ ಬಾಲಕ ಕೂಡಾ ಈಜುಕೊಳಕ್ಕೆ ಇಳಿದಿದ್ದಾನೆ. ಆದರೆ ಈತನನ್ನು ಅಲ್ಲಿದ್ದವರು ಯಾರೂ ಗಮನಿಸಿರಲಿಲ್ಲ. ಈಜು ಬಾರದ ಬಾಲಕ ನೀರಿನಲ್ಲಿ ಮುಳುಗೇಳುತ್ತಿದ್ದುದ್ದನು. ಇತರ ಬಾಲಕರ ಕಡೆ ನಿಗಾ ಇರಿಸಿದ್ದ ಪೋಷಕರಿಗೆ ಈತ ನೀರಿನಲ್ಲಿ ಮುಳುಗುತ್ತಿದ್ದ ವಿಚಾರ ಗೊತ್ತೇ ಆಗಲಿಲ್ಲ. ಮೂರು ಬಾರಿ ಮುಳುಗಿ ಮೇಲೆದ್ದ ಬಾಲಕ ಕೊನೆಗೆ ತನ್ನ ಎರಡು ಕೈಗಳನ್ನು ಮೇಲಕ್ಕೆತ್ತಿ ಸಹಾಯ ಯಾಚಿಸುವುದನ್ನು ಬಾಲಕನ ತಾಯಿ ಗಮನಿಸಿ ಬೊಬ್ಬೆ ಹಾಕಿದ್ದಾರೆ. ಕೂಡಲೇ ಸಂಬಂಧಿಕರೋರ್ವ ಈಜುಕ್ಕೊಳಕ್ಕೆ ಹಾರಿ ಬಾಲಕನನ್ನು ತಕ್ಷಣ ಮೇಲಕ್ಕೆತ್ತಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.

ಘಟನೆಯ ಕುರಿತಂತೆ ಪ್ರತಿಕ್ರಿಯಿಸಿರುವ ಬೀಗ್ರೋಸ್ ರೆಸಾರ್ಟ್‌ನ ವ್ಯವಸ್ಥಾಪಕ ಮಜೀದ್, ಕಾರ್ಯಕ್ರಮವೊಂದಕ್ಕೆ ಆಗಮಿಸಿದವರು ಈಜುಕೊಳ್ಳಕ್ಕೆ ಇಳಿದಿದ್ದಾರೆ. ರೆಸಾರ್ಟ್‌ನ ನಿಯಮದ ಪ್ರಕಾರ ಈಜುಕೊಳಕ್ಕೆ ಇಳಿಯಬೇಕಾದರೆ ಟಿಕೆಟ್ ಮಾಡಿಸಬೇಕು. ಹಾಗೆ ಈಜುಕೊಳಕ್ಕೆ ಇಳಿದವರ ಸುರಕ್ಷತೆಗಾಗಿ ನಮ್ಮ ಸಿಬ್ಬಂದಿ ಸ್ಥಳದಲ್ಲಿದ್ದು ನಿಗಾ ವಹಿಸುತ್ತಾರೆ. ಆದರೆ ಪೋಷಕರು ನಮಗೆ ತಿಳಿಯದಂತೆ ಮಕ್ಕಳನ್ನು ಈಜುಕೊಳ್ಳಕ್ಕೆ ಇಳಿಸಿದ ವೇಳೆ ಈ ಘಟನೆ ನಡೆದಿದೆ. ಸದ್ಯ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News