×
Ad

ಬಿ.ಸಿ.ರೋಡ್: ಕರಾವಳಿ ಕಲೋತ್ಸವ ಯಶಸ್ವಿ ಸಂಪನ್ನ

Update: 2018-12-31 18:34 IST

ಬಂಟ್ವಾಳ, ಡಿ. 31: ಸಾಂಸ್ಕೃತಿಕ ಕಲೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಸಂಸ್ಕಾರ, ಸಾಮರಸ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಾಧ್ಯ. ಕರಾವಳಿ ಕಲೋತ್ಸವದ ಮೂಲಕ ನಾಡಿನ ಪ್ರತಿಭೆಗಳು ಬೆಳಕಿಗೆ ಬರಲು ಸಹಕಾರಿಯಾಗಿದ್ದು, ಎಲ್ಲರ ಸಹಕಾರ, ನಿರಂತರ ಶ್ರಮದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಎಂದು ಕರಾವಳಿ ಕಲೋತ್ಸವದ ಅಧ್ಯಕ್ಷ ಸುದರ್ಶನ ಜೈನ್ ಹೇಳಿದ್ದಾರೆ.

ಅವರು ಬಿ.ಸಿ.ರೋಡ್ ಗೋಲ್ಡನ್ ಪಾರ್ಕ್ ಅಸೊಸಿಯೇಟ್ಸ್ ಮೈದಾನದಲ್ಲಿ ಕಳೆದ ಹತ್ತು ದಿನಗಳಿಂದ ಚಿಣ್ಯರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ರವಿವಾರ ರಾತ್ರಿ ನಡೆದ ಕರಾವಳಿ ಕಲೋತ್ಸವ-2018ರ ಸಮಾರೋಪ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಲೋತ್ಸವ ಬಂಟ್ವಾಳ ತಾಲೂಕಿನಲ್ಲಿ ಹೊಸ ಸಾಂಸ್ಕೃತಿಕ ಇತಿಹಾಸವನ್ನೇ ಸೃಷ್ಟಿ ಮಾಡಿದೆ. ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಎಲ್ಲ ವರ್ಗದ ಜನರು ಕಲೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿರುವುದು ಮನಸ್ಸಿಗೆ ಖುಷಿ ನೀಡಿದೆ ಎಂದರು.

ಇದೊಂದು ಸಾಮರಸ್ಯ ಮೂಡಿಸಿದ ಕಾರ್ಯಕ್ರಮ, ಹೊಸ ಪ್ರತಿಭೆಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದೆ. ಜಿಲ್ಲಾ ರಾಜ್ಯ ಮಟ್ಟದ ಸ್ಪರ್ಧೆಗಳ ಮೂಲಕ ಹೊರನಾಡಿನ ಪ್ರತಿಭೆಗಳು ಕೂಡಾ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿದ್ದಾಗಿ ಹೇಳಿ ಅಭಿನಂದಿಸಿದರು.

ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸೂಕ್ಷ್ಮ ಪ್ರದೇಶವೆನ್ನುವ ಬಂಟ್ವಾಳದಲ್ಲಿ ಕಲೋತ್ಸವದಂತಹ ದೊಡ್ಡಮಟ್ಟದ ಸಾಂಸ್ಕೃತಿಕ ಉತ್ಸವ ನಡೆಯುವ ಮೂಲಕ ಇಲ್ಲಿನ ಜನರಲ್ಲಿ ಹೊಸ ಸಂಭ್ರಮ ಮೂಡಿಸಿದೆ. ಪ್ರತಿಭೆಗಳಿಗೆ ವೇದಿಕೆ ಒದಗಿಸಿರುವುದು ಮಾತ್ರವಲ್ಲದೆ ಜನರು ತಮ್ಮ ದೈನಂದಿನ ಒತ್ತಡಗಳನ್ನು ಮರೆತು ಮನೋರಂಜನೆ ಪಡೆಯಲು ಕಲೋತ್ಸವದ ಅವಕಾಶ ಮಾಡಿಕೊಟ್ಟಿದೆ. ಇಂತಹ ಕಾರ್ಯ ಕ್ರಮಗಳು ತಾಲೂಕಾಡಳಿತಕ್ಕೂ ಹೆಚ್ಚು ಪ್ರಯೋಜನಕಾರಿ ಎಂದರು.

ಮುಖ್ಯ ಅತಿಥಿಗಳಾಗಿ ಕೊಟ್ಟಾರಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಬಾಲಕೃಷ್ಣ ಕೊಟ್ಟಾರಿ ಅತ್ತಾವರ, ಬಿ.ಸಿ.ರೋಡ್ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಮಾದಕಟ್ಟೆ ಈಶ್ವರ ಭಟ್, ರಂಗ ಕಲಾವಿದ ರಮೇಶ್ ರೈ ಕುಕ್ಕುವಳ್ಳಿ, ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಬೆಂಗಳೂರು, ಲೆಕ್ಕಪರಿಶೋಧಕ ಯತೀಶ್ ಭಂಡಾರಿ, ಚಿಣ್ಣರಲೋಕ ಸೇವಾ, ವಕೀಲ ನರೇಂದ್ರನಾಥ್ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಲೋತ್ಸವ ಸಮಿತಿ ಅಧ್ಯಕ್ಷರನ್ನು, ಚಿಣ್ಣರಲೋಕ ಸಂಸ್ಥಾಪಕ ಮೋಹನದಾಸ್ ಕೊಟ್ಟಾರಿ ಮುನ್ನೂರು, ಟ್ರಸ್ಟ್  ಗೌರವ ಅಧ್ಯಕ್ಷ ಪಿ. ಜಯರಾಮ ರೈ ವಿಟ್ಲ, ನಾಟಕ ತೀರ್ಪುಗಾರರರನ್ನು ಸಮ್ಮಾನಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸಿದ ಎಲ್ಲ ಕಾರ್ಯಕರ್ತರನ್ನು ಶಾಲು, ಹಾರ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ನಿರ್ದೇಶಕ ಲೋಕೇಶ್ ಸುವರ್ಣ ಸ್ವಾಗತಿಸಿ, ವಂದಿಸಿದರು, ರಾಜೇಶ್ ಕೊಟ್ಟಾರಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News