×
Ad

ಅಪ್ರಾಪ್ತ ಬಾಲಕರಿಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿ ಚಂದ್ರ ಹೆಮ್ಮಾಡಿ ನ್ಯಾಯಾಂಗ ಬಂಧನ ವಿಸ್ತರಣೆ

Update: 2018-12-31 19:47 IST

ಉಡುಪಿ, ಡಿ.31: ಅಪ್ರಾಪ್ತ ಶಾಲಾ ಬಾಲಕರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪೋಕ್ಸೊ ಪ್ರಕರಣದ ಆರೋಪಿ ಕುಂದಾಪುರದ ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ (40) ಯ ನ್ಯಾಯಾಂಗ ಬಂಧನ ಹಾಗೂ ಬಾಡಿ ವಾರೆಂಟ್ ಅವಧಿಯನ್ನು ಜ. 11ರವರೆಗೆ ವಿಸ್ತರಿಸಿ ಉಡುಪಿ ಜಿಲ್ಲಾ ಪ್ರಧಾನ ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯ ಸೋಮವಾರ ಆದೇಶ ನೀಡಿದೆ.

ಆರೋಪಿ ಹೆಮ್ಮಾಡಿಯನ್ನು ಹಿರಿಯಡ್ಕ ಸಬ್‌ಜೈಲಿನಿಂದ ಪೊಲೀಸ್ ಬಂದೋಬಸ್ತ್‌ನಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನೂತನ ನ್ಯಾಯಾಧೀಶರಾದ ಸಿ.ಎಂ. ಜೋಶಿ ಬಂಧನದ ಅವಧಿಯನ್ನು ವಿಸ್ತರಿಸಿ ಆದೇಶ ನೀಡಿದರು. ಹಿಂದೆ ಡಿ.17ರಂದು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದ ಸಂದರ್ಭದಲ್ಲಿ ಡಿ.31ರವರೆಗೆ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಿ ಆದೇಶ ನೀಡಲಾಗಿತ್ತು. ಈ ಅವಧಿ ಸೋಮವಾರ ಮುಗಿದ ಹಿನ್ನೆಲೆಯಲ್ಲಿ ಇಂದು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿತ್ತು.

ಬೈಂದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೊದಲ ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಂಗ ಹಾಗೂ ಉಳಿದ 20 ಪ್ರಕರಣದಲ್ಲಿ ಬಾಡಿ ವಾರೆಂಟ್ ಅವಧಿಯನ್ನು ವಿಸ್ತರಿಸುವಂತೆ ತನಿಖಾಧಿಕಾರಿಯಾಗಿರುವ ಬೈಂದೂರು ವೃತ್ತ ನಿರೀಕ್ಷಕ ಪರಮೇಶ್ವರ ಆರ್. ಗುನಗಾ ಅಭಿಯೋಜಕರ ಮೂಲಕ ನ್ಯಾಯಾಲಯಕ್ಕೆ ಲಿಖಿತ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಪೂರಕವಾಗಿ ಸ್ಪಂದಿಸಿದ ನ್ಯಾಯಾಧೀಶರು ಜ.11ವರೆಗೆ ವಿಸ್ತರಿಸಿ ಆದೇಶ ನೀಡಿದರು.

ಜಿಲ್ಲಾ ಸರಕಾರಿ ಅಭಿಯೋಜಕ ವಿಜಯ ವಾಸು ಪೂಜಾರಿ ಸರಕಾರದ ಪರವಾಗಿ ವಾದಿಸಿದ್ದು, ಆರೋಪಿ ಪರ ವಾದಿಸಲು ಕುಂದಾಪುರದ ವಕೀಲ ರೊಬ್ಬರು ನಿಯೋಜನೆಗೊಂಡಿದ್ದು, ನ್ಯಾಯಾಲಯದಲ್ಲಿ ಹಾಜರಿದ್ದರು. ಬಳಿಕ ಆರೋಪಿ ಹೆಮ್ಮಾಡಿಯನ್ನು ಹಿರಿಯಡ್ಕ ಸಬ್‌ಜೈಲಿಗೆ ಕರೆದೊಯ್ಯಲಾಯಿತು.

ಚಂದ್ರ ಕೆ. ಹೆಮ್ಮಾಡಿ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ನ. 10 ರಂದು ಮೊದಲ ಪ್ರಕರಣ ದಾಖಲಾಗಿತ್ತು. ಆ ಬಳಿಕ ಬೈಂದೂರು ಠಾಣೆ ಯೊಂದರಲ್ಲೇ 16, ಕೊಲ್ಲೂರು ಠಾಣೆಯಲ್ಲಿ 1, ಗಂಗೊಳ್ಳಿ ಠಾಣೆಯಲ್ಲಿ 3 ಹಾಗೂ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ 1 ಸಹಿತ ಒಟ್ಟು 21 ಪ್ರಕರಣಗಳು ದಾಖಲಾಗಿವೆ.

ಒಬ್ಬ ಆರೋಪಿ ಮೇಲೆ ದೇಶದಲ್ಲೇ ಅತಿ ಹೆಚ್ಚಿನ ಪೋಕ್ಸೋ ಪ್ರಕರಣ ದಾಖಲಾಗಿರುವ ನಿದರ್ಶನ ಇದೆಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News