×
Ad

ಮಲ್ಪೆ: ಬಾನಂಗಳದಲ್ಲಿ ಚೆಲುವಿನ ಚಿತ್ತಾರ ಬಿಡಿಸಿದ ಗಾಳಿಪಟಗಳು

Update: 2018-12-31 19:50 IST

ಉಡುಪಿ, ಡಿ.31: ಮಲ್ಪೆಸಮುದ್ರ ಕಿನಾರೆಯ ನೀಲಾಕಾಶದ ಸುಂದರ ಬಾನಂಗಳದಲ್ಲಿ ಸೋಮವಾರ ವಿವಿಧ ಗಾತ್ರದ, ವಿವಿಧ ವಿನ್ಯಾಸ ಹಾಗೂ ಆಕಾರದ ಗಾಳಿಪಟಗಳು ಆಕರ್ಷಕ ಚೆಲುವಿನ ಚಿತ್ತಾರಗಳನ್ನು ಮೂಡಿಸಿದವು.

ಜಿಲ್ಲಾಡಳಿತ ಹಾಗೂ ಮಲ್ಪೆಅಭಿವೃದ್ದಿ ಸಮಿತಿಗಳ ಮೂಲಕ ಇದೇ ಮೊದಲ ಬಾರಿ ಮಲ್ಪೆ ಬೀಚ್‌ನಲ್ಲಿ ನಡೆದ ಬೀಚ್ ಗಾಳಿಪಟ ಉತ್ಸವದಲ್ಲಿ, 110 ಅಡಿ ಉದ್ದದ ನಾಗನ ಹೋಲುವ 3ಡಿ ಗಾಳಿಪಟ, ಚಾರ್ಲಿ ಚಾಪ್ಲಿನ್ ಹೋಲುವ ಗಾಳಿಪಟ, 3ಡಿ ಡ್ರಾಗನ್, 3ಡಿ ಮೀನು, 3ಡಿ ಕಪ್ಪೆ, 3ಡಿ ಅಶೋಕ ಚಕ್ರ, 3ಡಿ ಅಕ್ಟೋಪಸ್, 3ಡಿ ಟೈಗರ್ ಶೇಪ್, 3ಡಿ ರ್ಯಾಬಿಟ್, ಲೇಡಿ ಬಗ್ ಗಾಳಿಪಟ, 3ಡಿ ಸಾಂತಾಕ್ಲಾಸ್ ಗಾಳಿಪಟ, 3ಡಿ ಹಾರ್ಟ್ ಶೇಪ್, 3ಡಿ ಪಾಂಡ ಶೇಪ್ ಹಾಗೂ ಸಂಜೆ ವೇಳೆಯಲ್ಲಿ ವಿಶೇಷ ವಿನ್ಯಾಸದ ಎಲ್‌ಇಡಿ ಗಾಳಿಪಟ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಬಗೆಬಗೆಯ, ವರ್ಣಗಳ ಗಾಳಿಪಟಗಳು ಬಾನಂಗಳದಲ್ಲಿ ರಾರಾಜಿಸಿದವು.

ಬೀಚ್ ಗಾಳಿಪಟ ಉತ್ಸವ ಉದ್ಘಾಟಿಸಿದ ಶಾಸಕ ರಘುಪತಿ ಭಟ್ ಮಾತನಾಡಿ, ಮಲ್ಪೆಯಲ್ಲಿ ಇದೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ ನಡೆದಿರುವ ಬೀಚ್ ಗಾಳಿಪಟ ಉತ್ಸವವನ್ನು ಪ್ರತಿ ವರ್ಷ ಏರ್ಪಡಿಸುವ ಮೂಲಕ ಜಿಲ್ಲೆಗೆ ಪ್ರವಾಸಿಗರನ್ನು ಆಕರ್ಷಿಸಿ, ಪ್ರವಾಸೋದ್ಯಮದ ಅಭಿವೃದ್ದಿಗೆ ಯತ್ನಿಸಲಾಗುವುದು ಎಂದರು.

ಈ ಬಾರಿ 30-35 ಮಂದಿ ವೃತ್ತಿಪರ ಗಾಳಿಪಟ ವಿನ್ಯಾಸಗಾರರು ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದು, ಆಸಕ್ತ ಸ್ಥಳೀಯರಿಗೆ ಗಾಳಿಪಟ ತಯಾರಿಕೆ ಬಗ್ಗೆ ಸಹ ತರಬೇತಿ ನೀಡುವರು ಎಂದು ಅವರು ಹೇಳಿದರು.

ಬೀಚ್ ಗಾಳಿಪಟ ಉತ್ಸವದ ಅಂಗವಾಗಿ, ವಿವಿಧ ವಿನ್ಯಾಸದ ಗಾಳಿಪಟ ತಯಾರಿಕೆ ಬಗ್ಗೆ ಹಾಗೂ ಗಾಳಿಪಟ ಹಾರಿಸುವ ವಿಧಾನದ ಬಗ್ಗೆ ಆಸಕ್ತರಿಗೆ ತರಬೇತಿ ನೀಡಲಾಯಿತು. ಗಾಳಿಪಟದ ಕುರಿತು ವಿಚಾರ ಸಂಕಿರಣ ನಡೆಯಿತು.

ಕಾರ್ಯಕ್ರಮದಲ್ಲಿ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್, ಮಲ್ಪೆಅಭಿವೃದ್ದಿ ಸಮಿತಿಯ ಸುದೇಶ್ ಶೆಟ್ಟಿ ಉಪಸ್ಥಿತರಿದ್ದರು.

ನಗರಸಭೆಯ ಪೌರಾಯುಕ್ತ ಆನಂದ್ ಕಲ್ಲೋಳಿಕರ್ ಸ್ವಾಗತಿಸಿದರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್‌ಕುಮಾರ್ ಶೆಟ್ಟಿ ವಂದಿಸಿದರು.

ಗಾಳಿಪಟ ಉತ್ಸವದೊಂದಿಗೆ ಹೊಸ ವರ್ಷದ ಆಚರಣೆಯೂ ಇಲ್ಲೇ ನಡೆಯಿತು. ಗಾಳಿಪಟ ಹಾರಿಸುವ ಕಾರ್ಯಕ್ರಮ ಸಂಜೆ 6ರವರೆಗೆ ನಡೆದರೆ, ಬಳಿಕ ರಾತ್ರಿಯ ಎಲ್‌ಇಡಿ ಗಾಳಿಪಟಗಳು ಮಲ್ಪೆ ಬೀಚ್ ಬಾನಿನುದ್ದಕ್ಕೂ ಬೆಳಗೆ ನೋಡುಗರಿಗೆ ಹೊಸ ಅನುಭವ, ಬೆಳಕಿನ ಲೋಕವನ್ನು ಸೃಷ್ಟಿಸಿದವು.

ಇದರೊಂದಿಗೆ ಸಂಜೆ 6ರಿಂದ ಮಧ್ಯರಾತ್ರಿಯವರೆಗೆ ಇಲ್ಲೇ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದವು. ರಾತ್ರಿ 11:55ರಿಂದ 12:30ರವರೆಗೆ ಅತ್ಯಾಕರ್ಷಕ ಸುಡುಮದ್ದುಗಳ ಪ್ರದರ್ಶನದೊಂದಿಗೆ ಎಲ್‌ಇಡಿ ಬಲೂನ್‌ಗಳ ಪ್ರದರ್ಶನವೂ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News