ಟೆಕ್ ಮಹಿಂದ್ರಾದ 822 ಕೋ.ರೂ. ಎಫ್‌ಡಿ ಜಪ್ತಿಯ ಇಡಿ ಆದೇಶವನ್ನು ತಳ್ಳಿಹಾಕಿದ ಹೈಕೋರ್ಟ್v

Update: 2018-12-31 14:20 GMT

ಹೈದರಾಬಾದ್,ಡಿ.31: ಟೆಕ್ ಮಹಿಂದ್ರಾಕ್ಕೆ ಸೇರಿದ 822 ಕೋ.ರೂ. ನಿರಖು ಠೇವಣಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿಕೊಂಡಿದ್ದ ಜಾರಿ ನಿರ್ದೇಶನಾಲಯ(ಇಡಿ)ದ ಆದೇಶವನ್ನು ಹೈದರಾಬಾದ್ ಉಚ್ಚ ನ್ಯಾಯಾಲಯವು ಸೋಮವಾರ ತಳ್ಳಿಹಾಕಿದೆ.

ಹಗರಣ ಪೀಡಿತ ಸತ್ಯಂ ಕಂಪ್ಯೂಟರ್ಸ್‌ನ್ನು ಟೆಕ್ ಮಹಿಂದ್ರಾ ವಿಧ್ಯುಕ್ತವಾಗಿ ಸ್ವಾಧೀನ ಪಡಿಸಿಕೊಳ್ಳುವ ಮುನ್ನ 2012ರಲ್ಲಿ ಇಡಿ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಈ ನಿರಖು ಠೇವಣಿಗಳನ್ನು ಜಪ್ತಿ ಮಾಡಿಕೊಂಡಿತ್ತು. ಇದು ಸತ್ಯಂ ಕಂಪ್ಯೂಟರ್ಸ್‌ನಿಂದ ಅಕ್ರಮವಾಗಿ ವರ್ಗಾವಣೆಗೊಂಡಿರುವ ಹಣವಾಗಿದೆ ಎಂದು ಅದು ಆರೋಪಿಸಿತ್ತು.

ಟೆಕ್ ಮಹಿಂದ್ರಾ ಸತ್ಯಂ ಕಂಪ್ಯೂಟರ್ಸ್‌ನ್ನು ಸ್ವಾಧೀನ ಪಡಿಸಿಕೊಂಡಿದ್ದ ಸಂದರ್ಭದಲ್ಲಿ ಆ ಕಂಪನಿಯಲ್ಲಿ ಹಣವಿರಲಿಲ್ಲ ಮತ್ತು ಮಹಿಂದ್ರಾ ಸಮೂಹ ಕಂಪನಿಯು ಅದಕ್ಕೆ ಹಣವನ್ನು ಒದಗಿಸಿತ್ತು ಎನ್ನುವುದನ್ನು ತಾವು ನ್ಯಾಯಾಲಯಕ್ಕೆ ಮನದಟ್ಟು ಮಾಡಿದ್ದಾಗಿ ಟೆಕ್ ಮಹಿಂದ್ರಾ ಪರ ವಕೀಲರು ತಿಳಿಸಿದರು.

 ಸತ್ಯಂ ಕಂಪ್ಯೂಟರ್ಸ್‌ನ ಸ್ಥಾಪಕ ಹಾಗೂ ಅಧ್ಯಕ್ಷ ರಾಮಲಿಂಗಾ ರಾಜು ಅವರು ತಾನು ಕಂಪನಿಯ ಲೆಕ್ಕಪತ್ರಗಳಲ್ಲಿ ಹಸ್ತಕ್ಷೇಪ ಮಾಡಿದ್ದು,ಬಾಧ್ಯತೆಗಳನ್ನು ಮರೆಮಾಚಿ ಸುಳ್ಳುಲಾಭವನ್ನು ತೋರಿಸಿದ್ದಾಗಿ ಅವರು 2009,ಜ.7ರಂದು ಸೆಬಿಗೆ ರವಾನಿಸಿದ್ದ ಇ-ಮೇಲ್‌ನಲ್ಲಿ ಒಪ್ಪಿಕೊಂಡ ಬಳಿಕ ಹಗರಣ ಬೆಳಕಿಗೆ ಬಂದಿತ್ತು. ಆಗ ನಾಲ್ಕನೆಯ ಅತಿದೊಡ್ಡ ಐಟಿ ಕಂಪನಿಯಾಗಿದ್ದ ಸತ್ಯಂ ಕಂಪ್ಯೂಟರ್ಸ್‌ನ ಹೂಡಿಕೆದಾರರು ಮತ್ತು ಉದ್ಯೋಗಿಗಳ ಹಿತರಕ್ಷಣೆಗಾಗಿ ಸರಕಾರವು ಅದರ ಹರಾಜಿಗೆ ಆದೇಶಿಸಿತ್ತು. ಅದನ್ನು ಟೆಕ್ ಮಹಿಂದ್ರಾ ಖರೀದಿಸಿ ಮಹಿಂದ್ರಾ ಸತ್ಯಂ ಎಂದು ಮರುನಾಮಕರಣಗೊಳಿಸಿತ್ತು ಮತ್ತು ಅಂತಿಮವಾಗಿ ತನ್ನಲ್ಲಿ ವಿಲೀನಗೊಳಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News